ಮುಂಬೈ (ಮಹಾರಾಷ್ಟ್ರ): ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರಕ್ಕೆ ಸೇರ್ಪಡೆಗೊಳ್ಳುವ ತಮ್ಮ ನಿರ್ಧಾರದಿಂದ ಎನ್‌ಸಿಪಿಯ ಬಹುತೇಕ ಶಾಸಕರು ತೃಪ್ತರಾಗಿದ್ದಾರೆ ಎಂದು ಮಹಾರಾಷ್ಟ್ರದ ನೂತನ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿದ್ದಾರೆ. ಇದೇ ವೇಳೆ, ಪಕ್ಷದ ಮೇಲೆ ಸಂಪೂರ್ಣ ಹಿಡಿತ ಹೊಂದಿದ್ದು, ಎನ್‌ಸಿಪಿ ಹೆಸರಿನಲ್ಲೇ ಚುನಾವಣೆ ಎದುರಿಸುತ್ತೇವೆ ಎಂದೂ ಅವರು ತಿಳಿಸಿದ್ದಾರೆ.
ಇಂದು ನಡೆದ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಪ್ರತಿಪಕ್ಷದ ನಾಯಕರಾಗಿದ್ದ ಅಜಿತ್ ಪವಾರ್ ಶಿವಸೇನೆ (ಏಕನಾಥ್ ಶಿಂಧೆ ಬಣ) ಹಾಗೂ ಬಿಜೆಪಿ ನೇತೃತ್ವದ ಸರ್ಕಾರವನ್ನು ಸೇರಿದ್ದಾರೆ. ಅಲ್ಲದೇ, ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇದರ ಬೆನ್ನಲ್ಲೇ ಎನ್‌ಸಿಪಿ ಕಾರ್ಯಾಧ್ಯಕ್ಷ ಪ್ರಫುಲ್ ಪಟೇಲ್ ಮತ್ತು ಹಿರಿಯ ಎನ್‌ಸಿಪಿ ನಾಯಕ ಛಗನ್ ಭುಜಬಲ್ ಅವರೊಂದಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅಜಿತ್ ಪವಾರ್, ಹಲವು ಜನರು ಈಗ ಸ್ವಲ್ಪ ಟೀಕಿಸುತ್ತಾರೆ. ನಾವು ಅದರ ಹೆಚ್ಚು ಗಮನ ಹರಿಸಲ್ಲ. ನಾವು ಮಹಾರಾಷ್ಟ್ರದ ಪ್ರಗತಿಗೆ ಶ್ರಮಿಸುತ್ತೇವೆ. ಆದ್ದರಿಂದ ನಾವು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ ಎಂದು ಹೇಳಿದರು.
ನಮ್ಮ ಬಹುತೇಕ ಶಾಸಕರು ಇದರಿಂದ ತೃಪ್ತರಾಗಿದ್ದಾರೆ. ಎನ್‌ಸಿಪಿ ಸರ್ಕಾರವನ್ನು ಬೆಂಬಲಿಸಿದೆ. ನಾವು ಮುಂಬರುವ ಎಲ್ಲ ಚುನಾವಣೆಗಳನ್ನು ಎನ್‌ಸಿಪಿ ಹೆಸರಿನಲ್ಲಿ ಎದುರಿಸುತ್ತೇವೆ. ಇಂದು ನಾವು ಮಹಾರಾಷ್ಟ್ರ ಸರ್ಕಾರವನ್ನು ಬೆಂಬಲಿಸಲು ನಿರ್ಧರಿಸಿ, ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದೇವೆ. ಚರ್ಚೆ ನಡೆಯಲಿದೆ. ನಂತರ ಖಾತೆಗಳ ಹಂಚಿಕೆ ತೀರ್ಮಾನವಾಗಲಿದೆ. ರಾಷ್ಟ್ರೀಯ ಮಟ್ಟದಲ್ಲಿ ಎಲ್ಲ ಅಂಶಗಳನ್ನು ಪರಿಗಣಿಸಿ ನಾವು ಅಭಿವೃದ್ಧಿಗೆ ಬೆಂಬಲಿಸಬೇಕು ಎಂದು ನಾವು ಭಾವಿಸಿದ್ದೇವೆ ಎಂದು ಅಜಿತ್ ಪವಾರ್ ತಿಳಿಸಿದರು.
ಇದನ್ನೂ ಓದಿ:Maharashtra politics: ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲನ: ಡಿಸಿಎಂ ಆಗಿ ಅಜಿತ್ ಪವಾರ್ ಅಧಿಕಾರ ಸ್ವೀಕಾರ