ಕರ್ನಾಟಕ

karnataka

ETV Bharat / bharat

ಕರ್ನಾಟಕ ಚುನಾವಣೆ: 40ರಿಂದ 45 ಅಭ್ಯರ್ಥಿಗಳ ಕಣಕ್ಕಿಳಿಸಲು 'ಪವಾರ್‌' ಪ್ಲಾನ್​

ಕೇಂದ್ರದ ಮಾಜಿ ಸಚಿವ ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿಯು ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 40-45 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಯೋಜನೆ ರೂಪಿಸುತ್ತಿದೆ.

NCP plans to field 40-45 candidates in Karnataka elections
ಕರ್ನಾಟಕ ಚುನಾವಣೆ: 40ರಿಂದ 45 ಅಭ್ಯರ್ಥಿಗಳ ಕಣಕ್ಕಿಳಿಸಲು 'ಪವಾರ್‌' ಪ್ಲಾನ್​

By

Published : Apr 14, 2023, 12:42 PM IST

ನವದೆಹಲಿ:ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್​ ಮಧ್ಯೆ ತ್ರಿಕೋನ ಸ್ಪರ್ಧೆ ಜೊತೆಗೆ ಆಮ್​ ಆದ್ಮಿ ಪಕ್ಷ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸೇರಿ ಇತರ ಪಕ್ಷಗಳು ಪೈಪೋಟಿ ನೀಡಲು ಮುಂದಾಗಿದೆ. ಇದರ ನಡುವೆ ಕೇಂದ್ರದ ಮಾಜಿ ಸಚಿವ ಶರದ್‌ ಪವಾರ್‌ ನೇತೃತ್ವದ ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಕ್ಷ (ಎನ್‌ಸಿಪಿ) 40-45 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಪ್ಲಾನ್​ ಮಾಡಿದೆ.

ಮೇ 10ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ತನ್ನ ಕಾರ್ಯತಂತ್ರಗಳನ್ನು ಅಂತಿಮಗೊಳಿಸಲು ಪವಾರ್ ಶನಿವಾರ ಮುಂಬೈನಲ್ಲಿ ಪಕ್ಷದ ನಾಯಕರ ಸಭೆಯನ್ನು ಕರೆದಿದ್ದಾರೆ. ಈ ಬಗ್ಗೆ ದೆಹಲಿ ಮಾತನಾಡಿರುವ ಅವರು, ಕರ್ನಾಟಕ ಚುನಾವಣೆಗೆ ನಮ್ಮ ಯೋಜನೆಗಳನ್ನು ಅಂತಿಮಗೊಳಿಸಲು ನಾವು ನಾಳೆ ಮುಂಬೈನಲ್ಲಿ ಸಭೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ರಾಜ್ಯದಲ್ಲಿ ಕಳೆದ 5 ವರ್ಷದಲ್ಲಿ ನಡೆದ ಚುನಾವಣೆ, ಉಪಚುನಾವಣೆ; ಗೆದ್ದವರ‍್ಯಾರು, ಸೋತವರ‍್ಯಾರು?

ಗೋವಾ, ಮೇಘಾಲಯ ಮತ್ತು ಮಣಿಪುರದಂತಹ ರಾಜ್ಯಗಳಲ್ಲಿ ಎನ್​ಸಿಪಿಯ ರಾಜಕೀಯ ಭವಿಷ್ಯ ಕ್ಷೀಣಿಸಿದೆ. ಇದರ ಪರಿಣಾಮ ಇತ್ತೀಚೆಗೆ ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಎನ್​ಸಿಪಿ ಕಳೆದುಕೊಂಡಿದೆ. ಇದನ್ನು ಮರಳಿ ಪಡೆಯುವ ಯತ್ನದ ಭಾಗವಾಗಿ ಕರ್ನಾಟಕ ಚುನಾವಣೆಯತ್ತ ಚಿತ್ತ ನೆಟ್ಟಿದೆ. ಇಷ್ಟೇ ಅಲ್ಲ, ಕರ್ನಾಟಕ ವಿಧಾನಸಭೆ ಚುನಾವಣೆಗೆ 'ಅಲಾರಾಂ ಗಡಿಯಾರ' ಚಿಹ್ನೆಯನ್ನು ಹಂಚಿಕೆ ಮಾಡಲು ಎನ್‌ಸಿಪಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿತ್ತು. ಇದಕ್ಕೆ ಚುನಾವಣಾ ಆಯೋಗ ಕೂಡ ಸಮ್ಮತಿಸಿದೆ.

ಎಂಇಎಸ್​ಗೆ ಬೆಂಬಲ: ರಾಜ್ಯಾದ್ಯಂತ ಒಟ್ಟು 224 ಸ್ಥಾನಗಳ ಪೈಕಿ ಕನಿಷ್ಠ 40-45 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಹಾಕಲು ಎನ್​ಸಿಪಿ ಮುಂದಾಗಿದೆ. ಮರಾಠಿ ಮಾತನಾಡುವ ಜನಸಂಖ್ಯೆ ಮಹಾರಾಷ್ಟ್ರ-ಕರ್ನಾಟಕ ಗಡಿ ಪ್ರದೇಶದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಬೆಂಬಲ ನೀಡಲು ಸಹ ಪಕ್ಷವು ಯೋಜಿಸುತ್ತಿದೆ ಎಂದು ಎನ್‌ಸಿಪಿ ನಾಯಕರೊಬ್ಬರು ತಿಳಿಸಿದ್ದಾರೆ.

ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಪ್ರತಿಪಕ್ಷಗಳ ಒಗ್ಗಟ್ಟಿನ ಕುರಿತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿಯಾದ ಒಂದು ದಿನದ ನಂತರ ಶರದ್​​ ಪವಾರ್ ಕರ್ನಾಟಕದಲ್ಲಿ ಸ್ಪರ್ಧಿಸುವ ಯೋಜನೆ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಮತ್ತೊಂದೆಡೆ, 2014ರ ಲೋಕಸಭಾ ಚುನಾವಣೆಯಲ್ಲಿ ಸೋತ ನಂತರ ತನ್ನ ಚುನಾವಣಾ ಕಾರ್ಯಕ್ಷಮತೆ ಹೆಚ್ಚಿಸುವ ಹಂಬಲದಲ್ಲಿರುವ ಕಾಂಗ್ರೆಸ್ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ದೊಡ್ಡ ಗೆಲುವಿನ ಭರವಸೆಯನ್ನು ಇಟ್ಟುಕೊಂಡಿದೆ.

ಕಳೆದ ದಿನಗಳ ಹಿಂದೆ ಹೈದರಾಬಾದ್​ ಸಂಸದ ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಸುಮಾರು 25 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಯೋಜನೆ ಇದೆ ಎಂದು ಹೇಳಿತ್ತು. ಜೆಡಿಎಸ್​ ಜೊತೆ ಚುನಾವಣಾ ಮೈತ್ರಿ ಮಾಡಿಕೊಳ್ಳಲಾಗುತ್ತಿದೆ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಒಸ್ಮಾನ್ ಘನಿ ತಿಳಿಸಿದ್ದರು. ಇದಕ್ಕೆ ಪುಷ್ಟಿ ನೀಡುವ ಮಾತುಗಳನ್ನಾಡಿದ್ದ ಪಕ್ಷದ ಮುಖ್ಯಸ್ಥ ಓವೈಸಿ, ಈಗಾಗಲೇ ನಾವು ಮೂವರು ಅಭ್ಯರ್ಥಿಗಳನ್ನು ಘೋಷಿಸಿದ್ದೇವೆ. ಮೈತ್ರಿಗೆ ನಾವು ಮುಕ್ತವಾಗಿದ್ದೇವೆ. ನಾವು ಖಂಡಿತವಾಗಿಯೂ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದರು.

ಇದನ್ನೂ ಓದಿ:ರಾಜ್ಯದ 25 ಕ್ಷೇತ್ರಗಳಲ್ಲಿ AIMIM ಅಭ್ಯರ್ಥಿಗಳು ಕಣಕ್ಕೆ: ಜೆಡಿಎಸ್​ ಜೊತೆ ಮೈತ್ರಿಗೆ ಪ್ಲಾನ್​

ABOUT THE AUTHOR

...view details