ನವದೆಹಲಿ:ರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷಗಳ ಅಭ್ಯರ್ಥಿಯಾಗಲು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ನಿರಾಕರಿಸಿದ್ದಾರೆ. ಹೀಗಾಗಿ ಇತರರನ್ನು ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ತಿಳಿಸಿದರು.
ರಾಷ್ಟ್ರಪತಿ ಚುನಾವಣೆಗೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಬಿಜೆಪಿ ಮತ್ತು ಪ್ರತಿಪಕ್ಷಗಳು ಅಭ್ಯರ್ಥಿಯ ಆಯ್ಕೆಗೆ ರಣತಂತ್ರ ರೂಪಿಸುತ್ತಿವೆ. ಪ್ರತಿಪಕ್ಷಗಳ ಪರವಾಗಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಮಾತುಗಳು ಕೇಳಿ ಬಂದಿದ್ದವು. ಇದೀಗ ಅವರು ಈ ಅವಕಾಶವನ್ನು ತಿರಸ್ಕರಿಸಿದ್ದಾರೆ.
ದೆಹಲಿಯಲ್ಲಿ ಸಿಪಿಎಂ ನಾಯಕರಾದ ಸೀತಾರಾಂ ಯೆಚೂರಿ, ಡಿ.ರಾಜಾ, ಪ್ರಫುಲ್ ಪಟೇಲ್ ಮತ್ತು ಪಿ.ಸಿ. ಚಾಕೊ ಅವರನ್ನು ಭೇಟಿ ಮಾಡಿದ ಶರದ್ ಪವಾರ್ ಚುನಾವಣೆಗೆ ತಾವು ಸ್ಪರ್ಧಿಸಲು ಸಿದ್ಧರಿಲ್ಲ. ಇತರರನ್ನು ಪರಿಗಣಿಸುವಂತೆ ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಸೀತಾರಾಂ ಯೆಚೂರಿ, ಶರದ್ ಪವಾರ್ ಅವರು ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ ಇತರರ ಹೆಸರುಗಳನ್ನು ಪರಿಗಣಿಸಲಾಗುವುದು ಎಂದಿದ್ದಾರೆ.