ಬಾರಾಮತಿ (ಮಹಾರಾಷ್ಟ್ರ):ಪುಣೆಯಲ್ಲಿ ಲೋಕಮಾನ್ಯ ಬಾಲಗಂಗಾಧರ್ ತಿಲಕ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ವೇದಿಕೆ ಹಂಚಿಕೊಂಡ ಬಳಿಕ, 'ಇಂಡಿಯಾ ಒಕ್ಕೂಟ'ದಲ್ಲಿ ಏನೋ ಸರಿಯಿಲ್ಲ ಎಂಬ ಗುಸುಗುಸು ಸುದ್ದಿಯನ್ನು ಇದೀಗ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ತಳ್ಳಿ ಹಾಕಿದ್ದಾರೆ.
ತಾವು ಯಾವುದೇ ಕಾರಣಕ್ಕೂ ಬಿಜೆಪಿ ಸೇರುವುದಿಲ್ಲ. ಇಂಡಿಯಾ ಒಕ್ಕೂಟದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಅವರು ಸೋಮವಾರ ಸ್ಪಷ್ಟಪಡಿಸಿದರು. ಎಲ್ಲ ಪ್ರತಿಪಕ್ಷಗಳು ಏಕಮಾತ್ರ ಉದ್ದೇಶಕ್ಕಾಗಿ ಒಟ್ಟಾಗಿವೆ. ಅದಕ್ಕಾಗಿ ಜೊತೆಯಾಗಿಯೇ ಹೋರಾಡುತ್ತೇವೆ ಎಂದು ಪವಾರ್ ನುಡಿದರು.
ಜನಾಂಗೀಯ ಕಲಹಕ್ಕೆ ತುತ್ತಾಗಿರುವ ಮಣಿಪುರದ ಜನರ ಸಂಕಷ್ಟಗಳ ಬಗ್ಗೆ ಕೇಂದ್ರ, ರಾಜ್ಯ ಸರ್ಕಾರಗಳು ಹೆಚ್ಚಿನ ಗಮನ ಹರಿಸಬೇಕು. ರಾಜ್ಯವು ಚೀನಾದೊಂದಿಗೆ ಗಡಿ ಹಂಚಿಕೊಂಡಿದೆ. ಈ ಸಮಸ್ಯೆಯನ್ನು ಕೇಂದ್ರ ಸೂಕ್ತ ರೀತಿಯಲ್ಲಿ ಪರಿಹರಿಸದಿರುವುದು ಆತಂಕಕಾರಿ ಎಂದು ದೂರಿದರು.
ಮಣಿಪುರ ಬಿಕ್ಕಟ್ಟಿನ ಬಗ್ಗೆ ಚರ್ಚೆಗೆ ಪ್ರತಿಪಕ್ಷಗಳು ಪದೇ ಪದೇ ಒತ್ತಾಯಿಸುತ್ತಿದ್ದರೂ, ಈ ವಿಷಯವು ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಯಲ್ಲಿ ಜಾಗ ಪಡೆಯದೇ ಇರುವುದು ಬೇಸರ ತಂದಿದೆ. ಮಣಿಪುರದಲ್ಲಿ ನಡೆದ ಹಿಂಸಾಚಾರಕ್ಕೆ ಹಿಂದಿನ ಸರ್ಕಾರಗಳೇ ಕಾರಣ ಬಿಜೆಪಿ ದೂಷಿಸುತ್ತಿದೆ. ಆದರೆ, ಕೇಸರಿ ಪಕ್ಷವೇ ಕಳೆದ ಒಂಬತ್ತು ವರ್ಷಗಳಿಂದ ರಾಜ್ಯದಲ್ಲಿ ಆಡಳಿತದಲ್ಲಿದೆ ಎಂದು ಅವರು ಹೇಳಿದರು.