ಮುಂಬೈ:2019 ರಲ್ಲಿ ಬಿಜೆಪಿಯ ದೇವೇಂದ್ರ ಫಡ್ನವೀಸ್ ಸರ್ಕಾರಕ್ಕೆ ಬೆಂಬಲ ಘೋಷಿಸಿ, ಬಳಿಕ ಉಲ್ಟಾ ಹೊಡೆದು ಸರ್ಕಾರದ ಪತನಕ್ಕೆ ಕಾರಣವಾಗಿದ್ದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ(ಎನ್‌ಸಿಪಿ) ನಾಯಕ ಅಜಿತ್ ಪವಾರ್ ನಿನ್ನೆಯಿಂದ ಕಣ್ಮರೆಯಾಗಿ, ಈಗ ದಿಢೀರ್ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿದ್ದಾರೆ. ಏಪ್ರಿಲ್ 7, 8, 9 ರ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದರು. ಇದು ಮಹಾರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಉಂಟು ಮಾಡಿತ್ತು.
ಕಳೆದ ಬಾರಿಯಂತೆ ದಿಢೀರ್ ನಾಪತ್ತೆಯಾಗಿದ್ದು ಮಹಾ ರಾಜಕೀಯ ಪಡಸಾಲೆಯಲ್ಲಿ ಗುಲ್ಲೆಬ್ಬಿಸಿತ್ತು. ಇದರ ಬೆನ್ನಲ್ಲೇ ಅವರು ಮಾಧ್ಯಮಗಳ ಮುಂದೆ ಪ್ರತ್ಯಕ್ಷವಾಗಿದ್ದಾರೆ. ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಜೆಪಿಸಿ ತನಿಖೆಯ ಅಗತ್ಯವಿಲ್ಲ ಎಂಬ ಹೇಳಿಕೆಗೆ ಪುಣೆಯಲ್ಲಿ ಉತ್ತರಿಸಿರುವ ಅಜಿತ್ ಪವಾರ್, "ನಾನು ಮಾಧ್ಯಮಗಳಲ್ಲಿ ಶರದ್ ಪವಾರ್ ಅವರ ಸಂದರ್ಶನವನ್ನು ನೋಡಿದ್ದೇನೆ. ಅವರು ನಮ್ಮ ಉನ್ನತ ನಾಯಕರು. ಅವರು ತಳೆಯುವ ನಿಲುವಿನ ಬಗ್ಗೆ ಮತ್ತೆ ಚರ್ಚಿಸುವುದಿಲ್ಲ. ಅವರ ನಿಲುವು ಏನಾಗಿರುತ್ತದೋ ಅದೇ ನಮ್ಮದು ಕೂಡ" ಎಂದು ಹೇಳಿದರು.
ದಿಢೀರ್ ನಾಪತ್ತೆಯಾಗಿದ್ದ ಅಜಿತ್:ಶುಕ್ರವಾರದಿಂದ ಅವರು ದಿಢೀರಬೇ ಕಣ್ಮರೆಯಾಗಿದ್ದರು. ನಿನ್ನೆಯಿಂದ ನಡೆಯಬೇಕಿದ್ದ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿತ್ತು. ಇದಕ್ಕೆ ಕಾರಣ ಸಹಿತ ಗೊತ್ತಾಗಿರಲಿಲ್ಲ. ಅಜಿತ್ ಪವಾರ್ ಅಜ್ಞಾತವಾಗಿದ್ದಲ್ಲದೇ, ಇವರ ಜೊತೆಗೆ 7 ಶಾಸಕರೂ ಇದ್ದಾರೆ ಎಂದು ಹೇಳಲಾಗಿತ್ತು. ಈ ಹಿಂದೆ ಫಡ್ನವೀಸ್ ಸರ್ಕಾರವನ್ನು ಪತನಗೊಳಿಸಿ ಮಾದರಿಯಲ್ಲಿಯೇ ಅವರು ನಾಪತ್ತೆಯಾಗಿದ್ದು ಹಲವು ಅನುಮಾನ ಮೂಡುವಂತೆ ಮಾಡಿದ್ದರು.
ಶುಕ್ರವಾರದ ಕಾರ್ಯಕ್ರಮವನ್ನು ರದ್ದುಗೊಳಿಸಿದ ನಂತರ ಅಜಿತ್ ಪವಾರ್ ಅವರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಅವರು ಎಲ್ಲಿದ್ದಾರೆ ಎಂದು ಕೂಡ ತಿಳಿದಿಲ್ಲ. ಅವರ ಜೊತೆಗೆ ಏಳು ಶಾಸಕರಿದ್ದಾರೆ ಎಂಬ ಚರ್ಚೆಯೂ ಜೋರಾಗಿದೆ. ಈ ಶಾಸಕರ ಹೆಸರು ಇನ್ನೂ ಬಹಿರಂಗವಾಗಿಲ್ಲವಾದರೂ, ಹೊಸ ರಾಜಕೀಯ ನಾಟಕ ಶುರುವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು.