ನವದೆಹಲಿ: ನ್ಯಾಷನಲ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಹಾಗೂ ರಾಜ್ಯಸಭಾ ಸದಸ್ಯ ಶರದ್ ಪವಾರ್ ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂದು ಪ್ರಧಾನಿ ಕಚೇರಿ ಟ್ವೀಟ್ ಮಾಡಿದೆ. ಮುಂಗಾರು ಸಂಸತ್ ಅಧಿವೇಶನ ಆರಂಭಕ್ಕೂ ಎರಡು ದಿನಗಳ ಮುನ್ನ ಇಬ್ಬರ ನಾಯಕರ ಭೇಟಿ ಕುತೂಹಲ ಮೂಡಿಸಿದೆ.
ಪ್ರಧಾನಿ ಭೇಟಿ ವೇಳೆ ಹೊಸದಾಗಿ ರಚಿಸಿರುವ ಸಹಕಾರ ಖಾತೆ ಹಾಗೂ ರೈತರ ಸಮಸ್ಯೆಗಳ ಬಗ್ಗೆ ಪವಾರ್ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ದೇಶದಲ್ಲಿ ಕೆಲ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದು ಶರದ್ ಪವಾರ್ ಟ್ವೀಟ್ ಮಾಡಿದ್ದಾರೆ.
ಭೇಟಿ ವೇಳೆ ಯಾವುದೇ ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ ಆಗಿಲ್ಲ ಎಂದು ಎನ್‌ಸಿಪಿ ನಾಯಕ ಹೇಳಿದ್ದಾರೆ. 2019ರ ಬಳಿಕ ಪವಾರ್, ಪ್ರಧಾನಿ ಅವರನ್ನು ಭೇಟಿ ಮಾಡುತ್ತಿರುವುದು ಇದೇ ಮೊದಲು.
ರಾಜ್ಯಸಭೆಗೆ ಹೊಸದಾಗಿ ಆಯ್ಕೆಯಾಗಿರುವ ಕೇಂದ್ರ ಸಚಿವ ಪಿಯೂಷ್ ಗೋಯಲ್, ನಿನ್ನೆಯಷ್ಟೇ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಎನ್‌ಸಿಪಿ ನಾಯಕ ಶರದ್ ಪವಾರ್, ಕಾಂಗ್ರೆಸ್ ಹಿರಿಯ ನಾಯಕ ಆನಂದ್ ಶರ್ಮಾ ಅವನ್ನು ಭೇಟಿ ಮಾಡಿದ್ದರು ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ನಾಳೆ ಸರ್ವ ಪಕ್ಷದ ಸಭೆ ಕರೆದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಸಭೆಯಲ್ಲಿ ಭಾಗವಹಿಸಲಿದ್ದಾರೆ.