ನವ ದೆಹಲಿ: ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿಯಲ್ಲಿ ನಡೆದ ಘರ್ಷಣೆ ವಿಷಯ ಇಂದು ಸಂಸತ್ತಿನಲ್ಲಿಯೂ ಪ್ರತಿಧ್ವನಿಸಿತು. ಲೋಕಸಭೆಯ ಶೂನ್ಯ ವೇಳೆಯಲ್ಲಿ ಕರ್ನಾಟಕದ ಬಿಜೆಪಿ ಸಂಸದರು ಮತ್ತು ಮಹಾರಾಷ್ಟ್ರದ ವಿರೋಧ ಪಕ್ಷಗಳಾದ ಎನ್‌ಸಿಪಿ ಮತ್ತು ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಸಂಸದರ ನಡುವೆ ಗದ್ದಲ ಉಂಟಾಗಿದೆ.
ಬೆಳಗಾವಿ ಗಡಿ ಪ್ರದೇಶಗಳಲ್ಲಿ ಉಂಟಾದ ಗಲಾಟೆಯ ಬಗ್ಗೆ ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಪ್ರಸ್ತಾಪಿಸಿ ಕರ್ನಾಟಕಕ್ಕೆ ಪ್ರವೇಶಿಸಲು ಪ್ರಯತ್ನಿಸಿದಾಗ ಮರಾಠಿಗರನ್ನು ಥಳಿಸಲಾಗಿದೆ ಎಂದು ಆರೋಪಿಸಿದರು. ಸುಪ್ರಿಯಾ ಮಾತಿನಿಂದ ಗದ್ದಲ ಆರಂಭವಾಯಿತು.
ಎರಡೂ ರಾಜ್ಯಗಳು ಬಿಜೆಪಿ ಆಡಳಿತದಲ್ಲಿದ್ದರೂ ಕರ್ನಾಟಕದ ಮುಖ್ಯಮಂತ್ರಿಗಳು ಮಹಾರಾಷ್ಟ್ರದ ಜನರ ವಿರುದ್ಧ ಮಾತನಾಡಿದ್ದಾರೆ. ಮಹಾರಾಷ್ಟ್ರದ ವಿರುದ್ಧ ಷಡ್ಯಂತ್ರ ನಡೆದಿದೆ ಎಂದು ದೂರಿದ ಅವರು, ಮಹಾರಾಷ್ಟ್ರದ ಜನರ ಮೇಲಿನ ಹಲ್ಲೆಯನ್ನು ಸಹಿಸಲು ಸಾಧ್ಯವಿಲ್ಲ ಎಂದರು.
ಈ ವಿಷಯದ ಬಗ್ಗೆ ಗೃಹ ಸಚಿವ ಅಮಿತ್ ಶಾ ಪ್ರತಿಕ್ರಿಯೆ ನೀಡಬೇಕೆಂದು ಸುಪ್ರಿಯಾ ಸುಳೆ ಒತ್ತಾಯಿಸಿದರು. ಇತ್ತ, ಕರ್ನಾಟಕ ಬಿಜೆಪಿ ಸಂಸದರು ಕೂಡ ಎದ್ದುನಿಂತು ಎನ್‌ಸಿಪಿ ನಾಯಕಿಯ ಹೇಳಿಕೆ ವಿರುದ್ಧ ಪ್ರತಿಭಟಿಸಿದರು. ಇದರ ನಡುವೆ ಶಿವಸೇನೆ ಮತ್ತು ಎನ್‌ಸಿಪಿ ಸಂಸದರು ಕರ್ನಾಟಕ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು. ಆಗ ಸ್ಪೀಕರ್ ಓಂ ಬಿರ್ಲಾ ಅವರು ಸದನದ ಶಿಸ್ತು ಕಾಪಾಡುವಂತೆ ಮನವಿ ಮಾಡುತ್ತಿದ್ದಂತೆ ಎನ್‌ಸಿಪಿ ಮತ್ತು ಶಿವಸೇನೆಯ ನಾಯಕರು ಸದನದಿಂದ ಹೊರ ನಡೆದರು.
ಇದನ್ನೂ ಓದಿ:ಗಡಿ ವಿವಾದ.. ನಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ, ಕಾನೂನು ಹೋರಾಟ: ಸಿಎಂ ಬಸವರಾಜ ಬೊಮ್ಮಾಯಿ