ನವದೆಹಲಿ:ಮಹಿಳೆಯೋರ್ವಳಿಗೆ ತಪ್ಪು ಕೇಶ ವಿನ್ಯಾಸ ಮತ್ತು ಚಿಕಿತ್ಸೆ (wrong haircut and hair treatment) ಮಾಡಿದ ಆರೋಪದಲ್ಲಿರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ (NCDRC-National Consumer Disputes Redressal Commission) ದೆಹಲಿ ಮೂಲದ ಐಷಾರಾಮಿ ಹೋಟೆಲ್ಗೆ ಸುಮಾರು 2 ಕೋಟಿ ರೂಪಾಯಿಗಳ ಪರಿಹಾರವನ್ನು ಮಹಿಳೆಗೆ ನೀಡಬೇಕೆಂದು ಸೂಚನೆ ನೀಡಿದೆ.
ಆಶ್ನಾ ರಾಯ್ ಎಂಬಾಕೆಯ ಅರ್ಜಿಯನ್ನು ವಿಚಾರಣೆ ನಡೆಸಿದರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಅಧ್ಯಕ್ಷ ಆರ್ಕೆ ಅಗರ್ವಾಲ್ ಮತ್ತು ಡಾ. ಎಸ್ಎಂ ಕಂಟೀಕರ್ ಅವರಿದ್ದ ಪೀಠ ಈ ಆದೇಶವನ್ನು ನೀಡಿದೆ.
ಆಶ್ನಾ ರಾಯ್ ಮಾಡೆಲ್ ಆಗಿದ್ದು, ಕೇಶಕ್ಕೆ ಸಂಬಂಧಿಸಿದ ಪ್ರಾಡೆಕ್ಟ್ಗಳ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಇದರ ಮೂಲಕ ಮಾತ್ರವಲ್ಲದೇ ಸೀನಿಯರ್ ಮ್ಯಾನೇಜ್ಮೆಂಟ್ ಪ್ರೊಫೆಷನಲ್ ಆಗಿಯೂ ಕೆಲಸ ಮಾಡುತ್ತಿದ್ದು, ಇದು ಆಕೆಯ ಆದಾಯದ ಮೂಲವಾಗಿತ್ತು.
ಒಮ್ಮೆ ದೆಹಲಿ ಮೂಲದ ಹೋಟೆಲ್ನ ಸಲೂನ್ಗೆ ಹೇರ್ಕಟ್ಗೆ ಭೇಟಿ ನೀಡಿದ್ದ ಅವರು, ಹೇಗೆ ಕೇಶ ವಿನ್ಯಾಸ ಮಾಡಬೇಕೆಂದು ಹೇರ್ ಡ್ರೆಸ್ಸರ್ಗೆ ಸೂಚನೆ ನೀಡಿದ್ದರು. ಆದರೆ ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಹೇರ್ ಡ್ರೆಸ್ಸರ್ ಆಶ್ನಾ ರಾಯ್ ನೀಡಿದ್ದ ಸೂಚನೆಯನ್ನು ಕಡೆಗಣಿಸಿ, ತನಗಿಷ್ಟ ಬಂದಂತೆ ಹೇರ್ಕಟ್ ಮಾಡಿದ್ದನು ಎನ್ನಲಾಗಿದೆ.
ಇದಾದ ನಂತರ ಆಕೆ, ಅಲ್ಲಿನ ಮ್ಯಾನೇಜ್ಮೆಂಟ್ಗೆ ದೂರು ನೀಡಿದ್ದಳು. ತನ್ನ ತಪ್ಪನ್ನು ಒಪ್ಪಿಕೊಂಡ ಹೋಟೆಲ್ ಮ್ಯಾನೇಜ್ಮೆಂಟ್, ಉಚಿತ ಕೇಶ ಚಿಕಿತ್ಸೆ ನೀಡುವುದಾಗಿ ಹೇಳಿತ್ತು. ಇದರಂತೆ ಆಕೆ ಚಿಕಿತ್ಸೆ ತೆಗೆದುಕೊಂಡಿದ್ದರು.
ಚಿಕಿತ್ಸೆಯ ನಂತರ ಆಕೆಯ ತಲೆಕೂದಲಿನಲ್ಲಿ ಸಾಕಷ್ಟು ಬದಲಾವಣೆಯಾಯಿತು, ಅಮೋನಿಯಾದ ಹೆಚ್ಚಳದಿಂದಾಗಿ ತಲೆ ಕೂದಲು ಉದುರಲು ಆರಂಭವಾಯಿತು. ಚಿಕಿತ್ಸೆ ನೀಡುವಾಗ ಆದ ವೈದ್ಯರ ತಪ್ಪಿನಿಂದಾಗಿ ಆಕೆ ಮಾಡೆಲಿಂಗ್ ಅನ್ನು ತೊರೆಯಬೇಕಾಯಿತು. ದೊಡ್ಡ ಮಟ್ಟದ ಮಾಡೆಲ್ ಆಗಬೇಕೆಂಬ ಆಸೆ ನುಚ್ಚು ನೂರಾಯಿತು. ಖಿನ್ನತೆಗೆ ಒಳಗಾದ ಆಕೆ ಕೆಲಸವನ್ನೂ ತ್ಯಜಿಸಿದ್ದಳು.
ಈ ಕುರಿತು ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಆಶ್ನಾ ರಾಯ್ ದೂರು ಸಲ್ಲಿಸಿದಾಗ ಇದನ್ನು ಆಲಿಸಿದ ಆರ್ಕೆ ಅಗರ್ವಾಲ್ ಮತ್ತು ಡಾ. ಎಸ್ಎಂ ಕಂಟೀಕರ್ ಸಂಬಂಧಿತ ಹೋಟೆಲ್ಗೆ ಎಂಟು ವಾರಗಳಲ್ಲಿ ಎರಡು ಕೋಟಿ ರೂಪಾಯಿಗಳ ಪರಿಹಾರ ನೀಡಬೇಕೆಂದು ಆದೇಶಿಸಿದೆ.
ಹೋಟೆಲ್ ಮ್ಯಾನೇಜ್ಮೆಂಟ್ ಕೂಡಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಆಕೆ ಹೇಳಿದಂತೆಯೇ ಕೇಶ ವಿನ್ಯಾಸ ಮಾಡಲಾಗಿತ್ತು ಹಾಗೂ ಚಿಕಿತ್ಸೆ ವೇಳೆ ಕೇಶಕ್ಕೆ ಯಾವುದೇ ಹಾನಿ ಮಾಡಿರಲಿಲ್ಲ. ಹೋಟೆಲ್ನ ಹೆಸರಿಗೆ ಮಸಿ ಬಳಿಯ ಬೇಕೆಂಬ ಉದ್ದೇಶದಿಂದ ಆಕೆ ದೂರನ್ನು ನೀಡಿದ್ದಾಳೆ ಎಂದು ಸ್ಪಷ್ಟನೆ ನೀಡಿದೆ.
ಇದನ್ನೂ ಓದಿ:ಮೃತದೇಹದಿಂದ ವಾಸನೆ: 14 ದಿನದ ಬಳಿಕ ಬೌದ್ಧ ಸನ್ಯಾಸಿ ಅಂತ್ಯಕ್ರಿಯೆ