ಮುಂಬೈ:ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಸಿಲುಕಿರುವ ಮುಂಬೈ ಕ್ರೂಸ್ ಡ್ರಗ್ಸ್ (ಹಡಗಿನಲ್ಲಿ ರೇವ್ ಪಾರ್ಟಿ) ಪ್ರಕರಣದ ತನಿಖೆ ನಡೆಸುತ್ತಿರುವ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೊ (NCB) ವಲಯ ನಿರ್ದೇಶಕ ಸಮೀರ್ ವಾಂಖೆಡೆ ಮುಂಬೈ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಮಹಾರಾಷ್ಟ್ರ ಪೊಲೀಸರಿಗೆ ದೂರು ನೀಡಿರುವ ಸಮೀರ್ ವಾಂಖೆಡೆ, 'ಇಬ್ಬರು ಪೊಲೀಸರು ನನ್ನ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದಾರೆ. ನಾನು ಹೋದೆಡೆಯಲ್ಲೆಲ್ಲಾ ನನ್ನನ್ನು ಹಿಂಬಾಲಿಸುತ್ತಿದ್ದಾರೆ ಅರ್ಥಾತ್ ಬೇಹುಗಾರಿಕೆ ನಡೆಸುತ್ತಿದ್ದಾರೆ' ಎಂದು ತಿಳಿಸಿರುವ ಮಾಹಿತಿ ಲಭ್ಯವಾಗಿದೆ.
ಸಮೀರ್ ವಾಂಖೆಡೆ ಸುಮಾರು ಆರು ವರ್ಷಗಳಿಂದ ಆಗಾಗ ತನ್ನ ತಾಯಿಯ ಸಮಾಧಿಯ ಬಳಿ ತೆರಳುತ್ತಾರೆ. ಇತ್ತೀಚೆಗೆ ಓಶಿವಾರ ಪೊಲೀಸ್ ಠಾಣೆಯ ಇಬ್ಬರು ಅಧಿಕಾರಿಗಳು ಸ್ಮಶಾನಕ್ಕೆ ತೆರಳಿ ಅಲ್ಲಿ ತನ್ನ ಚಲನವಲನದ ಸಿಸಿಟಿವಿ ದೃಶ್ಯಗಳನ್ನು ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಪ್ರತಿಕ್ರಿಯೆ ನೀಡಲು ಸಮೀರ್ ವಾಂಖೆಡೆ ನಿರಾಕರಿಸಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಈ ವಿಚಾರವಾಗಿ ಚರ್ಚಿಸಿದ್ದಾರೆ. ಮೂಲಗಳ ಪ್ರಕಾರ, ಸಮೀರ್ ವಾಂಖೆಡೆ ತಾವು ಅಧಿಕಾರ ಸ್ವೀಕರಿಸಿದಾಗಿನಿಂದ ಹಲವಾರು ದೊಡ್ಡ ಮಟ್ಟದ ಪ್ರಕರಣಗಳನ್ನು ತನಿಖೆ ಮಾಡಿದ್ದು, ಈ ರೀತಿಯ ಬೇಹುಗಾರಿಕೆಯನ್ನು ಈ ಮೊದಲು ಎದುರಿಸಿರಲಿಲ್ಲ.
ಸಮೀರ್ ವಾಂಖೆಡೆ ಈಗ ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರನ ಡ್ರಗ್ಸ್ ಕೇಸ್, ಸುಶಾಂತ್ ಸಿಂಗ್ ರಜಪೂತ್ಗೆ ಸಂಬಂಧಿಸಿದ ಡ್ರಗ್ಸ್ ಕೇಸ್ ತನಿಖೆ ನಡೆಸುತ್ತಿದ್ದು, 9 ತಿಂಗಳ ಹಿಂದೆ ಮಹಾರಾಷ್ಟ್ರ ಸಚಿವ ನವಾಬ್ ಮಲ್ಲಿಕ್ ಸಂಬಂಧಿ ಸಮೀರ್ ಖಾನ್ ಭಾಗಿಯಾದ ಆರೋಪದ ವಿರುದ್ಧ ಡ್ರಗ್ಸ್ ಕೇಸ್ ಅನ್ನೂ ವಿಚಾರಣೆ ನಡೆಸುತ್ತಿದ್ದಾರೆ.