ನವದೆಹಲಿ: ಕ್ರೂಸ್ ಡ್ರಗ್ಸ್ ಶಿಪ್ ಪ್ರಕರಣ ದಿನಕ್ಕೊಂದು ತಿರುವು ಕಾಣುತ್ತಿದೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಎನ್ಸಿಬಿಯ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧವೇ ವಂಚನೆ ಆರೋಪ ಕೇಳಿಬಂದಿದ್ದು, ಈ ಕುರಿತು ವಿಚಕ್ಷಣಾ ತನಿಖೆ ನಡೆಸಲು ಎನ್ಸಿಬಿ ಆದೇಶಿಸಿದೆ.
25 ಕೋಟಿ ರೂಪಾಯಿ ಬೇಡಿಕೆ ಇಟ್ಟಿರುವ ಆರೋಪ ಸಮೀರ್ ವಾಂಖೆಡೆ ಮೇಲಿದ್ದು, ಈ ಕುರಿತಂತೆ ತನಿಖೆ ನಡೆಸಲಾಗುಗುತ್ತಿದೆ. ಗೋಸಾವಿ ಮತ್ತು ಸ್ಯಾಮ್ ಡಿಸೋಜಾ ಎಂಬುವವರ ನಡುವೆ ನಡೆದಿದೆ ಎನ್ನಲಾದ ಮಾತುಕತೆ ಬಗ್ಗೆ ಪ್ರಭಾಕರ್ ಸೈಲ್ ಅಫಿಡವಿಟ್ ಸಲ್ಲಿಸಿದ್ದರು.
ಈ ಅಫಿಡವಿಟ್ನಲ್ಲಿ ಶಾರೂಖ್ ಖಾನ್ ಪುತ್ರನನ್ನು ಬಿಟ್ಟು ಬಿಡಲು 25 ಕೋಟಿ ರೂಪಾಯಿಗೆ ಬೇಡಿಕೆ ಇಡಲಾಗಿತ್ತು. ಆದರೆ ಕೆಲವು ಮಾತುಕತೆಗಳ ನಂತರ 18 ಕೋಟಿ ರೂಪಾಯಿಗೆ ಒಪ್ಪಂದವಾಗಿತ್ತು. ಇದರಲ್ಲಿ 8 ಕೋಟಿ ರೂಪಾಯಿಯನ್ನು ಸಮೀರ್ ವಾಂಖೆಡೆಗೆ ನೀಡಬೇಕು ಎಂದು ಕೆ.ಪಿ.ಗೋಸಾವಿ ಮತ್ತು ಸ್ಯಾಮ್ ಡಿಸೋಜಾ ನಡುವೆ ಮಾತುಕತೆ ನಡೆದಿತ್ತು ಎಂದು ಪ್ರಭಾಕರ್ ಸೈಲ್ ಆರೋಪಿಸಿದ್ದಾರೆ.
ಖಾಲಿ ಹಾಳೆಗಳ ಮೇಲೆ ಸಹಿ:ಗೋಸಾವಿ ಶಾರೂಖ್ ಖಾನ್ ಮ್ಯಾನೇಜರ್ನನ್ನೂ ಕೂಡಾ ಭೇಟಿಯಾಗಿದ್ದು, ವಾಂಖೆಡೆ ಎದುರಲ್ಲೇ 9ರಿಂದ 10 ಪುಟಗಳಷ್ಟು ಖಾಲಿ ಹಾಳೆಗಳಿಗೆ ಸಹಿ ಹಾಕುವಂತೆ ಕೇಳಿದ್ದನ್ನು ನಾನು ನೋಡಿದ್ದೇನೆ ಎಂದು ಪ್ರಭಾಕರ್ ಸೈಲ್ ಆರೋಪಿಸಿದ್ದಾರೆ.