ಮುಂಬೈ: ಎನ್‌ಸಿಬಿಯ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರು ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರ 'ಅಪಹರಣ ಮತ್ತು ಸುಲಿಗೆ ಪ್ರಕರಣ'ದ ಸಂಚಿನ ಭಾಗವಾಗಿದ್ದರು ಎಂದು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕ ಮೋಹಿತ್ ಭಾರತೀಯ ಅವರು ಈ ಸಂಚಿನ ಮಾಸ್ಟರ್ ಮೈಂಡ್. ವಾಂಖೆಡೆ ಅವರು ಓಶಿವಾರ ನಗರದ ಸ್ಮಶಾನವೊಂದಲ್ಲಿ ಭಾರತೀಯ ಅವರನ್ನು ಭೇಟಿಯಾಗಿದ್ದರು. ಆದರೆ ಅವರ (ವಾಂಖೆಡೆ) ಅದೃಷ್ಟದಿಂದಾಗಿ ಮತ್ತು ಅಲ್ಲಿನ ಸಿಸಿಟಿವಿ ಕಾರ್ಯನಿರ್ವಹಿಸದ ಕಾರಣ ನಮಗೆ ದೃಶ್ಯಾವಳಿಗಳನ್ನು ಪಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಭಯದಿಂದ ವಾಂಖೆಡೆ ತನ್ನನ್ನು ಹಿಂಬಾಲಿಸಲಾಗುತ್ತಿದೆ ಎಂದು ಸುಳ್ಳು ದೂರು ದಾಖಲಿಸಿದ್ದರು ಎಂದು ಹೇಳಿದರು.