ಮುಂಬೈ(ಮಹಾರಾಷ್ಟ್ರ):ಕ್ರೂಸ್ ಶಿಪ್ನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಎಂಟು ಮಂದಿಯನ್ನು ಬಂಧಿಸಲಾಗಿದೆ. ಈವರೆಗೆ ಪ್ರಕರಣದಲ್ಲಿ ಬಂಧಿತರಾದವರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಅವರಲ್ಲಿ ಕೆಲವರನ್ನು ಅಕ್ಟೋಬರ್ 11ರವರೆಗೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ವಶಕ್ಕೆ ನೀಡಲಾಗಿದೆ.
ಕ್ರೂಸ್ ಶಿಪ್ನಲ್ಲಿ ಪಾರ್ಟಿ ಮಾಡುತ್ತಿದ್ದ ಆರೋಪದ ಮೇಲೆ ಅಬ್ದುಲ್ ಶೇಖ್, ಶ್ರೇಯಸ್ ನಾಯರ್, ಮನೀಶ್ ರಾಜ್ಗರಿಯಾ, ಅವಿನ್ ಶಾಹು, ಸಮೀರ್ ಸೈಗಲ್, ಅಂದನ್ ಗೋಪಾಲ್, ಭಾಸ್ಕರ್ ಮತ್ತು ಇನ್ನೋರ್ವ ಅಪರಿಚಿತ ವ್ಯಕ್ತಿಯನ್ನು ಎನ್ಸಿಬಿ ಬಂಧಿಸಿದೆ.
ಇವರ ಪೈಕಿ ಅಬ್ದುಲ್ ಶೇಖ್, ಶ್ರೇಯಸ್ ನಾಯರ್, ಮನೀಶ್ ರಾಜ್ಗರಿಯಾ, ಅವಿನ್ ಶಾಹು ಅವರನ್ನು ಅಕ್ಟೋಬರ್ 11ರವರೆಗೆ ಎನ್ಸಿಬಿ ತನ್ನ ವಶದಲ್ಲಿಟ್ಟುಕೊಂಡು ವಿಚಾರಣೆ ನಡೆಸಲಿದೆ. ಇನ್ನುಳಿದವರನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಕ್ರಿಪ್ಟೋಕರೆನ್ಸಿ ಮತ್ತು ವಾಟ್ಸ್ಆ್ಯಪ್ ಕೋಡ್ವರ್ಡ್
ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಖರೀದಿಗೆ ಕ್ರಿಪ್ಟೋ ಕರೆನ್ಸಿ ಬಳಸುತ್ತಿದ್ದ ಎಂದು ಎನ್ಸಿಬಿ ಮಾಹಿತಿ ಬಹಿರಂಗಪಡಿಸಿದೆ. ಇದರ ಜೊತೆಗೆ ವಾಟ್ಸ್ಆ್ಯಪ್ ಕೋರ್ಡ್ ವರ್ಡ್ ಅನ್ನು ಡ್ರಗ್ಸ್ ಖರೀದಿಯನ್ನು ಗುಪ್ತವಾಗಿಡಲು ಬಳಸಲಾಗುತ್ತಿತ್ತು ಎಂದು ಎನ್ಸಿಬಿ ಹೇಳಿದೆ.
ಆರ್ಯನ್ ಖಾನ್ ವಿಚಾರಣೆ ನಡೆಸುತ್ತಿದ್ದಂತೆ ಕೆಲವೊಂದು ವಿಚಾರಗಳು ಅಂತಾರಾಷ್ಟ್ರೀಯ ಡ್ರಗ್ ಪೆಡ್ಲರ್ಗೂ ಸಂಬಂಧವಿದೆಯಾ ಎಂಬ ಅನುಮಾನಗಳು ಎನ್ಸಿಬಿಯನ್ನು ಕಾಡುತ್ತಿವೆ. ಆರ್ಯನ್ ಮತ್ತು ಮತ್ತೊಬ್ಬ ಆರೋಪಿಯಾದ ಅರ್ಬಾಜ್ ಮರ್ಚೆಂಟ್ ಅವರ ವಾಟ್ಸ್ ಆ್ಯಪ್ ಚಾಟ್ ಪರಿಶೀಲನೆ ನಡೆಸಿದಾಗ ಡ್ರಗ್ಸ್ ತರಿಸಿಕೊಂಡಿರುವುದಕ್ಕೆ ಪುರಾವೆಗಳು ದೊರೆತಿವೆ. ಆರ್ಯನ್ ಅರ್ಬಾಜ್ನನ್ನು ಡ್ರಗ್ಸ್ ತರಲು ಕೇಳಿದ ಚಾಟ್ ಕೂಡಾ ಎನ್ಸಿಬಿಗೆ ಸಿಕ್ಕಿದೆ ಎಂದು ಎನ್ಸಿಬಿ ಮೂಲಗಳು ಹೇಳಿವೆ.
ಕ್ರೂಸ್ನ ಸಿಇಒ ವಿಚಾರಣೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಡೆಲಿಯಾ ಕ್ರೂಸ್ನ ಸಿಇಒ ಜುರ್ಗೆನ್ ಬೆಲೋಮ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಕೆಲವು ಮೂಲಗಳ ಪ್ರಕಾರ ಆರ್ಯನ್ ಖಾನ್, ಅರ್ಬಾಜ್ ಸೇಠ್ ಮರ್ಚೆಂಟ್ ಮತ್ತು ಮುನ್ಮುನ್ ಧಮೇಚಾ ಅವರು ಕ್ರೂಸ್ಶಿಪ್ನಲ್ಲಿ ಡ್ರಗ್ಸ್ ಸಾಗಿಸುತ್ತಿದ್ದಾಗಿ ಒಪ್ಪಿಕೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಹಡಗು ರವಾನೆ ವಿಭಾಗದ ಮಹಾನಿರ್ದೇಶಕ ಅಮಿತಾಬ್ ಕುಮಾರ್, ಕ್ರೂಸ್ ಶಿಪ್ ಮುಂಬೈನಿಂದ ಗೋವಾಕ್ಕೆ ತೆರಳಲು ಅನುಮತಿ ನೀಡಿರಲಿಲ್ಲ. ಮರ್ಚೆಂಟ್ ಶಿಪ್ಪಿಂಗ್ ಕಾಯ್ದೆಯ ಸೆಕ್ಷನ್ 406 ರ ಪ್ರಕಾರ, ಪ್ರಯಾಣಕ್ಕೆ ಅನುಮತಿ ಪಡೆಯಬೇಕಾಗಿತ್ತು ಎಂದಿದ್ದಾರೆ. ಹಡಗು ರವಾನೆ ವಿಭಾಗದ ಉಪ ಮಹಾನಿರ್ದೇಶಕ ಮೊಹಮ್ಮದ್ ಪ್ರತಿಕ್ರಿಯೆ ನೀಡಿ, ಈ ಕುರಿತು ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.
ಇದನ್ನೂ ಓದಿ:ಜಮ್ಮು ಕಾಶ್ಮೀರದಲ್ಲಿ ಸಂಚಲನ ಸೃಷ್ಟಿಸಿದ ಉಗ್ರರ ದಾಳಿ: ಪ್ರಸಿದ್ಧ ಕೆಮಿಸ್ಟ್ ಸೇರಿ ಮೂವರ ಸಾವು