ದಾಂತೇವಾಡ (ಛತ್ತೀಸ್‌ಗಢ): ಛತ್ತೀಸ್‌ಗಢದಲ್ಲಿ ನಕ್ಸಲರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಬಸ್ತಾರ್ ವಿಭಾಗದಲ್ಲಿ ಪ್ರಯಾಣಿಕರ ಬಸ್‌ಗೆ ಬೆಂಕಿ ಹಚ್ಚಿ ದುಷ್ಕೃತ್ಯ ಎಸಗಿದ್ದಾರೆ. ಮತ್ತೊಂದೆಡೆ, ಸುಧಾರಿತ ಸ್ಫೋಟಕ ಸಾಧನ (ಐಇಡಿ) ಬಳಕೆ ಮಾಡಿ ರಸ್ತೆಯನ್ನು ಸ್ಫೋಟಿಸಿದ್ದಾರೆ.
ದಾಂತೇವಾಡ ಜಿಲ್ಲೆಯಲ್ಲಿ ನಾರಾಯಣಪುರದಿಂದ ದಾಂತೇವಾಡಕ್ಕೆ ಬರುತ್ತಿದ್ದ ಪ್ರಯಾಣಿಕರ ಬಸ್‌ಗೆ ನಕ್ಸಲರು ಮಲೆವಾಹಿ ಮತ್ತು ಬೋಡ್ಲಿ ನಡುವೆ ರಸ್ತೆಯಲ್ಲಿ ಬೆಂಕಿ ಹಚ್ಚಿದ್ದಾರೆ. ಇದರಿಂದ ಬಸ್ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಅಲ್ಲದೇ, ರಸ್ತೆಯಲ್ಲಿ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಈ ಹಿಂದೆಯೂ ನಾರಾಯಣಪುರದಲ್ಲಿ ನಕ್ಸಲೀಯರು ವಿಧ್ವಂಸಕ ಕೃತ್ಯ ಎಸಗಿದ್ದರು. ರಸ್ತೆ ನಿರ್ಮಾಣದಲ್ಲಿ ತೊಡಗಿದ್ದ ಮೂರು ವಾಹನಗಳನ್ನು ಸುಟ್ಟು ಹಾಕಿದ್ದರು.
ಇದನ್ನೂ ಓದಿ:ಗೋಡೌನ್‌ನಿಂದ ಅಪಾರ ಪ್ರಮಾಣದ ಸ್ಫೋಟಕ ದೋಚಿದ ಮಾವೋವಾದಿಗಳು
ಇದೇ ವೇಳೆ ಬಿಜಾಪುರ ಜಿಲ್ಲೆಯಲ್ಲೂ ನಕ್ಸಲರು ದುಷ್ಕೃತ್ಯ ಎಸಗಿದ್ದಾರೆ. ಪೊಟಂಪರಾದಲ್ಲಿ ನಕ್ಸಲರು ಅಳವಡಿಸಿದ್ದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಗೊಂಡಿದ್ದು, ರಸ್ತೆ ಹಾನಿಯಾಗಿದೆ. ಶುಕ್ರವಾರ ಸಂಜೆ ಈ ಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂತಹ ಕೃತ್ಯಗಳ ಮೂಲಕ ನಕ್ಸಲರು ಜನರನ್ನು ಭಯಭೀತಗೊಳಿಸಲು ಯತ್ನಿಸಿದ್ದಾರೆ.
ಈ ವಾರ ರಾಜ್ಯದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರ ಐಇಡಿ ಸ್ಫೋಟದಿಂದ ಛತ್ತೀಸ್‌ಗಢ ಸಶಸ್ತ್ರ ಪಡೆಗಳ (ಸಿಎಎಫ್) ಅಧಿಕಾರಿಯೊಬ್ಬರು ಮೃತಪಟ್ಟಿದ್ದರು. ಮೃತ ಅಧಿಕಾರಿಯನ್ನು ಸಹಾಯಕ ಪ್ಲಟೂನ್ ಕಮಾಂಡರ್ ವಿಜಯ್ ಯಾದವ್ (58) ಎಂದು ಗುರುತಿಸಲಾಗಿತ್ತು. ಇದಕ್ಕೂ ಮುನ್ನ ಮಾರ್ಚ್ 17ರಂದು ನಾರಾಯಣಪುರದ ಕುರುಷ್ನಾರ್ ಸೋನ್‌ಪುರ ರಸ್ತೆಯಲ್ಲಿರುವ ಮೊಬೈಲ್ ಟವರ್‌ನ ಸೋಲಾರ್ ಪ್ಯಾನೆಲ್‌ಗೆ ನಕ್ಸಲರು ಬೆಂಕಿ ಹಚ್ಚಿದ್ದರು. ಅಲ್ಲದೇ, ಎರಡ್ಮೂರು ಸುತ್ತು ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದರು.
ಇದನ್ನೂ ಓದಿ:ಆರು ವಾಹನಗಳಿಗೆ ಬೆಂಕಿ ಹಚ್ಚಿ ದುಷ್ಕೃತ್ಯ ಮೆರೆದ ನಕ್ಸಲರು: ಸ್ಥಳದಲ್ಲಿ ಬ್ಯಾನರ್ ಇಟ್ಟು ಪರಾರಿ