ಬಸ್ತಾರ್(ಛತ್ತೀಸ್‌ಗಢ):ರಾಜ್ಯದಬಸ್ತಾರ್ ವಿಭಾಗದಲ್ಲಿ ಬುಧವಾರ ನಕ್ಸಲರು ಮತ್ತೆ ವಿಧ್ವಂಸಕ ಕೃತ್ಯ ಎಸಗಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ ಸೇರಿದಂತೆ ಹಲವು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಸ್ಥಳದಲ್ಲಿ ಕರಪತ್ರಗಳನ್ನು ಎಸೆದು ಪರಾರಿಯಾಗಿದ್ದಾರೆ.
ಸುಕ್ಮಾ ಬಳಿಯ ರಾಷ್ಟ್ರೀಯ ಹೆದ್ದಾರಿ 30ರಲ್ಲಿ ಸಂಜೆ 7.30ರ ಸುಮಾರಿಗೆ ಎರಡು ಟ್ರೇಲರ್ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಬಳಿಕ ಜಾಗರಗುಂದ ಪೊಲೀಸ್ ಠಾಣೆ ವ್ಯಾಪ್ತಿಯ ಕಮರಗುಡದಲ್ಲಿ ಪಿಕಪ್ ವಾಹನಕ್ಕೆ ಬೆಂಕಿ ಇಟ್ಟಿದ್ದಾರೆ. ಅಲ್ಲದೇ, ಪ್ರಯಾಣಿಕರ ಬಸ್ಗೂ ಬೆಂಕಿ ಹಚ್ಚಿ ಆತಂಕ ಸೃಷ್ಟಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಬಸ್ನಲ್ಲಿದ್ದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ.
ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿವೆ. ಸುತ್ತಮುತ್ತಲ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ನಕ್ಸಲರ ಈ ದುಷ್ಕೃತ್ಯದ ಕಾರಣಕ್ಕೆ ಸುಕ್ಮಾ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ದಟ್ಟನೆ ಉಂಟಾಗಿದೆ. ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ಸ್ಥಳಕ್ಕೆ ರವಾನಿಸಲಾಗಿದೆ.
ಎರಡು ವರ್ಷಗಳ ಹಿಂದೆಯೂ ಇದೇ ಪ್ರದೇಶದಲ್ಲಿ ನಕ್ಸಲರು ಏಳು ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಅಲ್ಲದೇ, ಇಂದು ಬೆಳಿಗ್ಗೆಯಷ್ಟೇ ಸುಕ್ಮಾದ ಕೊತ್ತಪಲ್ಲಿ ಮತ್ತು ನಗರಂ ಅರಣ್ಯದಲ್ಲಿ ಭದ್ರತಾ ಪಡೆಗಳು ಮತ್ತು ನಕ್ಸಲೀಯರ ನಡುವೆ ಎನ್‌ಕೌಂಟರ್ ನಡೆದಿತ್ತು. ಇದರ ಬೆನ್ನಲ್ಲೇ, ಸಂಜೆ ಹೆದ್ದಾರಿಯಲ್ಲಿ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.
ಇದನ್ನೂ ಓದಿ:ಛತ್ತೀಸ್‌ಗಢ: ಭದ್ರತಾ ಪಡೆಗಳಿಂದ ಗುಂಡಿನ ದಾಳಿ; 6 ಮಂದಿ ನಕ್ಸಲರಿಗೆ ಗಾಯ