ಛತ್ತೀಸ್‌ಗಢ: ನಾರಾಯಣಪುರ ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆ ದೇವಸ್ಥಾನಕ್ಕೆ ತೆರಳುತ್ತಿದ್ದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಮುಖಂಡನನ್ನು ಮಾವೋವಾದಿಗಳು ಹತ್ಯೆ ಮಾಡಿದ್ದಾರೆ. ಮುಂಡತಿಕ್ರಾ ಗ್ರಾಮದ 43 ವರ್ಷದ ಕೋಮಲ್ ಮಾಂಝಿ ಸಾವನ್ನಪ್ಪಿದ್ದಾರೆ. ಮೂಲಗಳ ಪ್ರಕಾರ, ಅಮ್ಡಾಯಿ ಗಣಿ ವಿಚಾರವಾಗಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಬೆಳಿಗ್ಗೆ 10.30ರ ಸುಮಾರಿಗೆ ಗ್ರಾಮದಲ್ಲಿರುವ ಶೀತಲ ದೇವಸ್ಥಾನಕ್ಕೆ ಕೋಮಲ್ ಮಾಂಝಿ ತೆರಳುತ್ತಿದ್ದರು. ದಾರಿಯಲ್ಲಿ ಬಿಜೆಪಿ ಮುಖಂಡನನ್ನು ತಡೆದ ಮಾವೋವಾದಿಗಳ ಗುಂಪು ಕೊಡಲಿಯಿಂದ ಹೊಡೆದು ಕೊಲೆಗೈದಿದ್ದಾರೆ. ಮೂಲಗಳಂತೆ, ಮಾವೋವಾದಿಗಳು ಮಾಂಝಿಗೆ ಈ ಹಿಂದೆ ಹಲವು ಬಾರಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು. ನಂತರ ಸ್ಥಳೀಯ ಪೊಲೀಸರು ಮಧ್ಯಪ್ರವೇಶಿಸಿ ಬಿಗಿ ಭದ್ರತೆಯನ್ನು ಒದಗಿಸಿದ್ದರು. ಬಳಿಕ, ಮಾಂಝಿ ಪೊಲೀಸರ ಸಹಾಯ ಪಡೆಯಲು ನಿರಾಕರಿಸಿದ್ದರು.
ಈ ಘಟನೆಯಿಂದ ಇಡೀ ಪ್ರದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ನಗರದಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಹಗಲು ಹೊತ್ತಿನಲ್ಲಿ ಮಾವೋವಾದಿಗಳು ನಡೆಸಿದ ಮೂರನೇ ಕೊಲೆ ಪ್ರಕರಣ ಇದಾಗಿದ್ದು, ಇದಕ್ಕೂ ಮುನ್ನ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಾಗರ್ ಸಾಹು ಹಾಗೂ ರತನ್ ದುಬೆ ಅವರನ್ನು ನಕ್ಸಲೀಯರು ಹತ್ಯೆ ಮಾಡಿದ್ದರು.