ಕರ್ನಾಟಕ

karnataka

ETV Bharat / bharat

10ನೇ ತರಗತಿ ಪರೀಕ್ಷೆ ಪಾಸಾದ ನಕ್ಸಲ್ ದಂಪತಿಯ ಪುತ್ರಿಗೆ ವೈದ್ಯೆಯಾಗುವ ಹಂಬಲ - ನಾರಾಯಣಪುರ ಜಿಲ್ಲಾಧಿಕಾರಿ ಅಜೀತ್ ವಸಂತ್

ನಕ್ಸಲೀಯ ಚಟುವಟಿಕೆಯಲ್ಲಿ ತೊಡಗಿರುವ ದಂಪತಿಯ ಪುತ್ರಿಯೊಬ್ಬರು 10ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣಳಾಗುವ ಮೂಲಕ ವೈದ್ಯೆಯಾಗುವ ಭರವಸೆ ವ್ಯಕ್ತಪಡಿಸಿದ್ದಾಳೆ.

10 board exam
ನಕ್ಸಲೀಯ ದಂಪತಿಯ ಪುತ್ರಿ

By

Published : May 12, 2023, 1:04 PM IST

ನಾರಾಯಣಪುರ: ಛತ್ತೀಸ್‌ಗಢದಲ್ಲಿ 18 ವರ್ಷದ ಬಾಲಕಿಯೊಬ್ಬಳು 10ನೇ ತರಗತಿಯ ರಾಜ್ಯ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದು ಆಕೆಯ ಕೌಟುಂಬಿಕ ಹಿನ್ನೆಲೆಯನ್ನು ಗಮನಿಸಿದ್ರೆ ಇದೊಂದು ಅಸಾಧಾರಣ ಸಾಧನೆ ಎನ್ನುವುದರಲ್ಲಿ ತಪ್ಪಿಲ್ಲ. ಯಾಕಂದ್ರೆ, ಆಕೆಯ ಪೋಷಕರು ನಕ್ಸಲೀಯರಾಗಿದ್ದು, ಬಂದೂಕಿನ ನೆರಳಿನಲ್ಲಿ ಜೀವನ ನಡೆಸುತ್ತಿದ್ದಾರೆ. ಆದರೆ, ಹದಿಹರೆಯದ ಈ ಬಾಲಕಿ ಮಾತ್ರ ಮದ್ದುಗುಂಡುಗಳಿಂದ ದೂರವಿದ್ದು ಓದುವುದನ್ನು ಮುಂದುವರೆಸಿದ್ದಾಳೆ.

ರಾಜ್ಯ ರಾಜಧಾನಿ ರಾಯ್‌ಪುರದಿಂದ 300 ಕಿ.ಮೀ ದೂರದಲ್ಲಿರುವ ನಾರಾಯಣಪುರ ಜಿಲ್ಲೆಯ ಅಬುಜ್ಮದ್ ಪ್ರದೇಶದ ಎನ್ಮೆಟಾ ಬಕುಲ್ವಾಹಿ ಗ್ರಾಮದ ಸಕ್ರಿಯ ನಕ್ಸಲೀಯ ಚಟುವಟಿಕೆಗಳಲ್ಲಿ ತೊಡಗಿರುವ ಮಾವೋವಾದಿಗಳಾದ ಸೋನ್ವಾರಮ್ ಸಲಾಂ ಮತ್ತು ಆರತಿ ಅವರ ಪುತ್ರಿ 10 ನೇ ತರಗತಿಯಲ್ಲಿ ಶೇಕಡಾ 54.5 ಅಂಕಗಳನ್ನು ಗಳಿಸಿದ್ದಾಳೆ. ಅಷ್ಟೇ ಅಲ್ಲದೆ, ಮುಂದಿನ ದಿನಗಳಲ್ಲಿ ವೈದ್ಯೆಯಾಗಿ ತನ್ನ ಜಿಲ್ಲೆಯ ಸ್ಥಳೀಯ ಆದಿವಾಸಿಗಳ ಸೇವೆ ಸಲ್ಲಿಸುವ ಭರವಸೆ ವ್ಯಕ್ತಪಡಿಸಿದ್ದಾಳೆ. ಛತ್ತೀಸ್‌ಗಢದ ಪ್ರೌಢ ಶಿಕ್ಷಣ ಮಂಡಳಿಯು ಬುಧವಾರ ಫಲಿತಾಂಶ ಪ್ರಕಟಿಸಿದೆ.

ಈ ಕುರಿತು ಮಾಧ್ಯಮಗಳೊಂದಿಗೆ ಸಂತಸ ವ್ಯಕ್ತಪಡಿಸಿದ ವಿದ್ಯಾರ್ಥಿನಿ, "ನಾನು 1 ರಿಂದ 5 ನೇ ತರಗತಿಯವರೆಗೆ ಕುತುಲ್ ಗ್ರಾಮದ (ನಾರಾಯಣಪುರ) ರಾಮಕೃಷ್ಣ ಮಿಷನ್ ವಿವೇಕಾನಂದ ವಿದ್ಯಾ ಮಂದಿರದಲ್ಲಿ ಮತ್ತು 6 ರಿಂದ 8 ನೇ ತರಗತಿಯವರೆಗೆ ನಾರಾಯಣಪುರ ಪಟ್ಟಣದ ರಾಮಕೃಷ್ಣ ಮಿಷನ್ ವಿವೇಕಾನಂದ ವಿದ್ಯಾಪೀಠದಲ್ಲಿ ಓದಿದೆ. ಬಳಿಕ ಜಾತಿ ಮತ್ತು ವಾಸಸ್ಥಳ ಪ್ರಮಾಣಪತ್ರಗಳನ್ನು ಹೊಂದಿಲ್ಲದ ಕಾರಣ ವ್ಯಾಸಂಗವನ್ನು ತೊರೆದು ನನ್ನ ಹಳ್ಳಿ ಎನ್ಮೆಟಾಗೆ ಹೋದೆ. ಎರಡು ವರ್ಷಗಳ ನಂತರ, ನಾನು ನಾರಾಯಣಪುರದ ಭುರ್ವಾಲ್ ಗ್ರಾಮದಲ್ಲಿರುವ ನನ್ನ ಸಹೋದರಿಯ ಮನೆಗೆ ಹೋಗಿ ಅಲ್ಲಿ ಹತ್ತಿರದ ಭಟ್ಪಾಲ್ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಓದುವುದನ್ನು ಪುನರಾರಂಭಿಸಿದೆ. ಪ್ರತಿನಿತ್ಯ 2 ಕಿಮೀ ದೂರ ನಡೆದುಕೊಂಡು ಹೋಗಿ ತರಗತಿಗಳಿಗೆ ಹಾಜರಾಗುತ್ತಿದೆ. ಇಂದು 10ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವುದು ಖುಷಿ ತಂದಿದೆ. ನಾನು ಮುಂದೆ ವೈದ್ಯೆಯಾಗಿ ನನ್ನ ಹಳ್ಳಿಯ ಜನರ ಸೇವೆ ಮಾಡುತ್ತೇನೆ" ಎಂದಳು.

ಕೆಲವು ದಾಖಲೆಗಳ ಕೊರತೆಯಿಂದಾಗಿ ಮಾದಿಯಾ ಬುಡಕಟ್ಟಿನ ಸದಸ್ಯೆ ಎಂದು ಗುರುತಿಸಿ, ಪರಿಶಿಷ್ಟ ಪಂಗಡದ (ಎಸ್‌ಟಿ) ಪ್ರಮಾಣಪತ್ರ ಮತ್ತು ನಿವಾಸ ದೃಢೀಕರಣವನ್ನು ಪಡೆಯಲು ಸಾಧ್ಯವಾಗಿಲ್ಲ. ಪರಿಣಾಮ ಮುಂದಿನ ನನ್ನ ಅಧ್ಯಯನದಲ್ಲಿ ಸವಾಲುಗಳನ್ನು ಎದುರಿಸಬೇಕಾಗಬಹುದು. ಆದ್ರೆ, ಈ ಪ್ರಮಾಣಪತ್ರವು ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ನನಗೆ ಸಹಾಯವಾಗಬಹುದು ಎಂದ ವಿದ್ಯಾರ್ಥಿನಿ ಪೋಷಕರ ಬಗ್ಗೆ ಯಾವುದೇ ಮಾಹಿತಿ ಬಹಿರಂಗಪಡಿಸಲಿಲ್ಲ. ಆಕೆಯ ಕಿರಿಯ ಸಹೋದರ ಅಕಬೇಡ ಗ್ರಾಮದ ರಾಮಕೃಷ್ಣ ಮಿಷನ್ ಆಶ್ರಮ ಶಾಲೆಯಲ್ಲಿ 9 ನೇ ತರಗತಿಯಲ್ಲಿ ಓದುತ್ತಿದ್ದಾನೆ.

ವಿದ್ಯಾರ್ಥಿನಿ ಸಾಧನೆ ಕುರಿತು ಪ್ರತಿಕ್ರಿಯೆ ನೀಡಿದ ನಾರಾಯಣಪುರ ಜಿಲ್ಲಾಧಿಕಾರಿ ಅಜೀತ್ ವಸಂತ್ , "ವಿದ್ಯಾರ್ಥಿಗೆ ಅಗತ್ಯ ದಾಖಲೆಗಳನ್ನು ಪಡೆಯಲು ಸಾಧ್ಯವಿರುವ ಎಲ್ಲಾ ಸಹಾಯ ಮಾಡುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ವಿಶೇಷವಾಗಿ ಸಂರಕ್ಷಿತ ಬುಡಕಟ್ಟುಗಳಿಗೆ ಸೇರಿದ ಜನರಿಗೆ ನೀಡುವ ಶಿಕ್ಷಣಕ್ಕೆ ಸಂಬಂಧಿಸಿದ ಎಲ್ಲಾ ಸರ್ಕಾರಿ ಯೋಜನೆಗಳ ಪ್ರಯೋಜನವನ್ನು ಬಾಲಕಿ ಪಡೆಯುತ್ತಾಳೆ" ಎಂದಿದ್ದಾರೆ.

ಇದನ್ನೂ ಓದಿ :ಸಿಬಿಎಸ್ಇ 12th: ಕಳೆದ ವರ್ಷಕ್ಕಿಂತ ಕಡಿಮೆ ಫಲಿತಾಂಶ; ಟಾಪರ್ಸ್‌ ಹೆಸರು ಬಿಡುಗಡೆ ಇಲ್ಲ

ಬಾಲಕಿಯ ತಂದೆ ಸೋನ್ವಾರಮ್ ಸಲಾಂ ಪ್ರಸ್ತುತ ಅಬುಜ್ಮದ್​ನ ಅಕಬೇಡ ಮತ್ತು ಕುತುಲ್ ಪ್ರದೇಶಗಳಲ್ಲಿ ಮಾವೋವಾದಿಗಳ ಕಮಾಂಡರ್ ಆಗಿ ಸಕ್ರಿಯರಾಗಿದ್ದಾರೆ. ಅವರ ಪತ್ನಿ ಕೆಳ ಹಂತದ ಕೇಡರ್ ಆಗಿದ್ದಾರೆ ಎಂದು ಪೊಲೀಸರಿಗೆ ಶರಣಾದ ನಕ್ಸಲೈಟ್​ವೊಬ್ಬರು ಮಾಹಿತಿ ನೀಡಿದ್ದಾರೆ.

"ಅಬುಜ್ಮದ್ ಪ್ರದೇಶವು ದಟ್ಟವಾದ ಕಾಡುಗಳು ಮತ್ತು ಗುಡ್ಡಗಾಡು ಪ್ರದೇಶಗಳಿಂದ ಆವೃತವಾಗಿದೆ. ಇದು ಹಿರಿಯ ನಕ್ಸಲೀಯರಿಗೆ ಸುರಕ್ಷಿತ ಅಡಗುತಾಣವೆಂದು ಪರಿಗಣಿಸಲ್ಪಟ್ಟಿದೆ. ಅಷ್ಟೇ ಅಲ್ಲದೆ, ಮಾವೋವಾದಿ ಕಾರ್ಯಕರ್ತರಿಗೆ ತರಬೇತಿ ಶಿಬಿರಗಳನ್ನು ನಡೆಸಲು ಸೂಕ್ತವಾಗಿದೆ. ಆದರೂ ಕಳೆದೆರಡು ವರ್ಷಗಳಲ್ಲಿ ಸಕಾರಾತ್ಮಕ ಬದಲಾವಣೆಗಳಿಗೆ ಸಾಕ್ಷಿಯಾಗಿದೆ" ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ABOUT THE AUTHOR

...view details