ಮುಂಬೈ(ಮಹಾರಾಷ್ಟ್ರ) :ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಕೇಂದ್ರ ಸಚಿವ ನಾರಾಯಣ್ ರಾಣೆ ಅವರನ್ನು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (NCP) ಮುಖಂಡ ನವಾಬ್ ಮಲಿಕ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನವಾಬ್ ಮಲಿಕ್, ಮುಖ್ಯಮಂತ್ರಿಗೆ ಕಪಾಳಮೋಕ್ಷ ಮಾಡಬೇಕೆಂದಿದ್ದೆ ಎಂದು ರಾಣೆ ಹೇಳಿಕೆ ನೀಡಿರುವುದು ಕೇವಲ ಸಿಎಂ ಠಾಕ್ರೆಗೆ ಮಾಡಿದ ಅವಮಾನವಲ್ಲ, ಇಡೀ ಮಹಾರಾಷ್ಟ್ರ ರಾಜ್ಯಕ್ಕೆ ಮಾಡಿದ ಅವಮಾನ.
ಪಶ್ಚಿಮ ಬಂಗಾಳದಲ್ಲಿ ಮಾಡಿದ್ದನ್ನೇ ಮಹಾರಾಷ್ಟ್ರದಲ್ಲಿ ಪುನರಾವರ್ತಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಬಂಗಾಳದಲ್ಲಿ ಹಿಂಸಾಚಾರವನ್ನು ಪ್ರಚೋದಿಸಿದ ಮಾರ್ಗವನ್ನ ಇಲ್ಲೂ ಅಳವಡಿಸಲು ಯತ್ನಿಸುತ್ತಿದೆ ಎಂದು ಕಿಡಿಕಾರಿದರು.
ಇದನ್ನೂ ಓದಿ: ಸಿಎಂ ಠಾಕ್ರೆ ಬಗ್ಗೆ ವಿವಾದಾತ್ಮಕ ಹೇಳಿಕೆ: ಕೇಂದ್ರ ಸಚಿವ ನಾರಾಯಣ್ ರಾಣೆ ವಶಕ್ಕೆ ಪಡೆದ ಪೊಲೀಸ್
ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ಕಾನೂನನ್ನ ಕೈಗೆ ತೆಗೆದುಕೊಳ್ಳುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ತಮ್ಮ ಅವಹೇಳನಕಾರಿ ಹೇಳಿಕೆಗೆ ನಾರಾಯಣ್ ರಾಣೆಯನ್ನು ಈಗಾಗಲೇ ವಶಕ್ಕೆ ಪಡೆದಿದ್ದು, ನಾಸಿಕ್ ಸೈಬರ್ ಪೊಲೀಸರು ಅವರನ್ನು ಬಂಧಿಸಲು ಆದೇಶ ಹೊರಡಿಸಿದ್ದಾರೆ ಎಂದು ಮಲಿಕ್ ಹೇಳಿದರು.