ಮುಂಬೈ :ಸೈಕ್ಲೋನ್ ತೌಕ್ತೆ ಅಬ್ಬರಕ್ಕೆ ಸಮುದ್ರದಲ್ಲಿ ಸಿಲುಕಿಕೊಂಡಿದ್ದ ಬಾರ್ಜ್ ಪಿ 305ಯಲ್ಲಿದ್ದ 273 ಜನರ ಪೈಕಿ 184 ಜನರನ್ನು ರಕ್ಷಿಸಲಾಗಿದೆ. ಚಂಡಮಾರುತದ ಅಬ್ಬರಕ್ಕೆ ಈಗಾಗಲೇ 34 ಮಂದಿ ಸಾವನ್ನಪ್ಪಿದ್ದಾರೆ.
ಇದೇ ವೇಳೆ, ಸಮುದ್ರದಲ್ಲಿ ಸಿಲುಕಿದ ಇತರೆ ಎರಡು ಬಾರ್ಜ್ಗಳು ಮತ್ತು ತೈಲ ರಿಗ್ನಲ್ಲಿರುವ ಎಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ನೌಕಾಪಡೆ ತಿಳಿಸಿದೆ.
ನೌಕಾಪಡೆಯಿಂದ 184 ಜನರ ರಕ್ಷಣೆ ಗುಜರಾತ್ ಕರಾವಳಿಯನ್ನು ಚಂಡಮಾರುತ ಅಪ್ಪಳಿಸುವ ಕೆಲವೇ ಗಂಟೆಗಳ ಮೊದಲು ಮುಂಬೈ ಬಳಿಯ ಅರಬ್ಬೀ ಸಮುದ್ರದಲ್ಲಿ ತೌಕ್ತೆ ತನ್ನ ಶಕ್ತಿ ಪ್ರದರ್ಶಿಸಿತ್ತು. ಈ ವೇಳೆ ಬಾರ್ಜ್ ಪಿ305ರಲ್ಲಿದ್ದ ಜನ ಚಂಡಮಾರುತಕ್ಕೆ ಸಿಲುಕಿಕೊಂಡಿದ್ದರು. ಅದರಲ್ಲಿದ್ದ 273 ಜನರ ಪೈಕಿ 184 ಜನರನ್ನು ಬುಧವಾರ ಬೆಳಗ್ಗೆ ರಕ್ಷಿಸಲಾಗಿದೆ.
ಐಎನ್‌ಎಸ್ ಕೊಚ್ಚಿ ಮತ್ತು ಐಎನ್‌ಎಸ್ ಕೋಲ್ಕತಾ ಮೂಲಕ 184 ಜನರನ್ನು ಮುಂಬೈನ ಬಂದರ್ಗೆ ಕರೆದೊಯ್ಯಲಾಗಿದೆ. ಐಎನ್‌ಎಸ್ ತೆಗ್, ಐಎನ್‌ಎಸ್ ಬೆಟ್ವಾ, ಐಎನ್‌ಎಸ್ ಬ್ಯಾಸ್, ಪಿ 81 ವಿಮಾನ ಮತ್ತು ಹೆಲಿಕಾಪ್ಟರ್‌ಗಳ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುನ್ನಡೆಸಿವೆ ಎಂದು ನೌಕಾಪಡೆ ಮಾಹಿತಿ ನೀಡಿದೆ.
ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್ ಮಂಗಳವಾರದವರೆಗೆ ಬಾರ್ಜ್ 'ಜಿಎಎಲ್ ಕನ್ಸ್ಟ್ರಕ್ಟರ್'ನಲ್ಲಿದ್ದ 137 ಜನರನ್ನು ರಕ್ಷಣೆ ಮಾಡಿದ್ದರು. ಇನ್ನೊಂದೆಡೆ, ಬಾರ್ಜ್ ಎಸ್‌ಎಸ್ -3 ನಲ್ಲಿ 196 ಜನರು ಮತ್ತು ತೈಲ ರಿಗ್ ಸಾಗರ್ ಭೂಷಣ್‌ನಲ್ಲಿ 101 ಜನರು ಸುರಕ್ಷಿತರಾಗಿದ್ದಾರೆ.
ಒಎನ್‌ಜಿಸಿ ಮತ್ತು ಎಸ್‌ಸಿಐ ಹಡಗುಗಳ ಮೂಲಕ ಅವರನ್ನು ಸುರಕ್ಷಿತವಾಗಿ ಕರಾವಳಿ ತೀರಕ್ಕೆ ತರಲಾಗುತ್ತಿದೆ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳಿಗೆ ಸಹಾಯ ಮಾಡಲು ಐಎನ್ಎಸ್ ತಲ್ವಾರ್ ಅನ್ನು ಈ ಪ್ರದೇಶದಲ್ಲಿ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರದಂದು 707 ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಮೂರು ಬಾರ್ಜ್ಗಳು ಮತ್ತು ತೈಲ ರಿಗ್ ಸಮುದ್ರದಲ್ಲಿ ಸಿಕ್ಕಿಬಿದ್ದಿವೆ ಎಂದು ನೌಕಾಪಡೆಯ ಅಧಿಕಾರಿಯೊಬ್ಬರು ತಿಳಿಸಿದ್ದರು. ಇವುಗಳಲ್ಲಿ 273 ಜನರನ್ನು ಹೊತ್ತ 'ಪಿ305' ಬಾರ್ಜ್, 137 ಸಿಬ್ಬಂದಿಯನ್ನು ಹೊತ್ತ 'ಜಿಎಎಲ್ ಕನ್ಸ್ಟ್ರಕ್ಟರ್' ಮತ್ತು 196 ಸಿಬ್ಬಂದಿ ಇದ್ದ ಎಸ್ಎಸ್ -3 ಬಾರ್ಜ್ ಸೇರಿವೆ.
ಅಲ್ಲದೆ, 'ಸಾಗರ್ ಭೂಷಣ್' ತೈಲ ರಿಗ್ ಸಹ ಸಮುದ್ರದಲ್ಲಿ ಸಿಕ್ಕಿಬಿದ್ದಿದ್ದು, ಇದರಲ್ಲಿ 101 ಸಿಬ್ಬಂದಿ ಇದ್ದಾರೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. ಇನ್ನು ಅರಬ್ಬಿ ಸಮುದ್ರದಲ್ಲಿ 34 ಶವಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ನಾಲ್ಕು ದಶಕಗಳಲ್ಲಿ ಇದು ಅತ್ಯಂತ ಸವಾಲಿನ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಾಗಿದೆ ಎಂದು ನೌಕಾಪಡೆಯ ಉಪ ಮುಖ್ಯಸ್ಥ ವೈಸ್ ಅಡ್ಮಿರಲ್ ಮುರಳೀಧರ್ ಸದಾಶಿವ್ ಪವಾರ್ ಹೇಳಿದ್ದಾರೆ.