ಮುಂಬೈ:ಭಾರತೀಯ ನೌಕಾಪಡೆಯ ಸುಧಾರಿತ ಲಘು ಹೆಲಿಕಾಪ್ಟರ್(ಎಎಲ್ಎಚ್) ಮುಂಬೈ ಕರಾವಳಿಯಲ್ಲಿ ಇಂದು ಬೆಳಗ್ಗೆ ಅಪಘಾತಕ್ಕೀಡಾಗಿ ತುರ್ತು ಭೂಸ್ಪರ್ಶ ಕಂಡಿದೆ. ಅದರಲ್ಲಿದ್ದ ಮೂವರು ಸಿಬ್ಬಂದಿಯನ್ನು ಗಸ್ತು ಪಡೆ ರಕ್ಷಣೆ ಮಾಡಿದೆ.
ಎಂದಿನಂತೆ ಇಂದು ಬೆಳಗ್ಗೆ ಹೆಲಿಕಾಪ್ಟರ್ ಗಸ್ತು ತಿರುಗುತ್ತಿದ್ದ ವೇಳೆ ಮುಂಬೈ ಪ್ರದೇಶದ ಕರಾವಳಿ ತೀರದಲ್ಲಿ ಅಪಘಾತಕ್ಕೀಡಾಗಿ ತುರ್ತು ಭೂಸ್ಪರ್ಶ ಕಂಡಿದೆ. ತಕ್ಷಣವೇ ಮಾಹಿತಿ ಪಡೆದ ನೌಕಾ ಗಸ್ತು ಪಡೆ ಮೂವರು ಸಿಬ್ಬಂದಿಯನ್ನು ರಕ್ಷಿಸಿದೆ. ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಭಾರತೀಯ ನೌಕಾಪಡೆಯ ವಕ್ತಾರರು, ಭಾರತೀಯ ನೌಕಾಪಡೆಯ ಲಘು ವಿಮಾನ ಮುಂಬೈನಿಂದ ತೀರದ ಸಮೀಪದಲ್ಲಿ ಗಸ್ತು ನಡೆಸುತ್ತಿದ್ದ ವೇಳೆ ಅಪಘಾತಕ್ಕೀಡಾಗಿದೆ. ವಿಮಾನ ತುರ್ತು ಭೂಸ್ಪರ್ಶ ಕಂಡಿದ್ದು, ಅದರಲ್ಲಿದ್ದ ಮೂವರು ಸಿಬ್ಬಂದಿಯನ್ನು ನೌಕಾದಳದ ಗಸ್ತು ಪಡೆ ಸುರಕ್ಷಿತವಾಗಿ ಕಾಪಾಡಿದ್ದಾರೆ. ಹೆಲಿಕಾಪ್ಟರ್ ಯಾವ ದೋಷ ಉಂಟಾಯಿತು ಎಂಬುದರ ಪತ್ತೆಗಾಗಿ ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಹಿಂದಿನ ಘಟನಾವಳಿಗಳು:ಕೆಲ ದಿನಗಳ ಹಿಂದೆ ರಾಜಸ್ಥಾನದ ಜಲೋರ್ ಜಿಲ್ಲೆಯ ಅಹೋರ್ ಉಪವಿಭಾಗದ ಪದರ್ಲಿ ಗ್ರಾಮದಲ್ಲಿ ಸೇನಾ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿತ್ತು. ತಾಂತ್ರಿಕ ದೋಷದಿಂದ ತುರ್ತು ಭೂಸ್ಪರ್ಶ ಮಾಡಬೇಕಾಯಿತು ಎಂದು ಸೇನೆ ನಂತರ ಸ್ಪಷ್ಟಪಡಿಸಿತ್ತು. ಜೋಧ್‌ಪುರದಿಂದ ಅಬು ರಸ್ತೆ ಎಂಬಲ್ಲಿಗೆ ತೆರಳುತ್ತಿದ್ದ ಸೇನಾ ಹೆಲಿಕಾಪ್ಟರ್‌ನಲ್ಲಿ ಮೂವರು ಸಿಬ್ಬಂದಿ ಇದ್ದರು. ತಾಂತ್ರಿಕ ದೋಷ ಕಂಡುಬಂದ ತಕ್ಷಣ ಪೈಲಟ್ ಹೆಲಿಕಾಪ್ಟರ್ ಅನ್ನು ಖಾಸಗಿ ಜಾಗದಲ್ಲಿ ಇಳಿಸಿದ್ದರು.