ಚಂಡೀಗಢ(ಪಂಜಾಬ್):ಕನ್ಯಾಕುಮಾರಿಯಿಂದ ಆರಂಭವಾದ ಭಾರತ್ ಜೋಡೋ ಯಾತ್ರೆ ಕಾಶ್ಮೀರ ತಲುಪಿದೆ ಇನ್ನು ಕೆಲವೇ ದಿನಗಳಲ್ಲಿ ಯಾತ್ರೆ ಮುಗಿಯಲಿದೆ ಎನ್ನಲಾಗುತ್ತಿದೆ. ಜನವರಿ 26ರಂದು ಕಣಿವೆ ರಾಜ್ಯದಲ್ಲಿ ಧ್ವಜಾರೋಹಣದ ನಂತರ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆಯನ್ನು ಅಂತಿಮ ಗೊಳಿಸಲಿದ್ದಾರೆ. ನಂತರ ಜನವರಿ 30 ರಂದು ಬೃಹತ್ ರ್‍ಯಾಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ಜನವರಿ 30 ರಂದು ಶ್ರೀನಗರದಲ್ಲಿ ಮಹಾ ಸಮಾರೋಪ ರ್‍ಯಾಲಿ ಸಮಾರೋಪದ ಹಿನ್ನೆಲೆಯಲ್ಲಿ ಬೃಹತ್ ಸಮಾರಂಭ ನಡೆಯುತ್ತಿದೆ. ಈ ಸಮಾರೋಪ ರ್‍ಯಾಲಿಗೆ ಹಲವಾರು ಜನರಿಗೆ ಆಹ್ವಾನ ಮಾಡಲಾಗುತ್ತಿದೆ. ಅದರಲ್ಲಿ ನವಜೋತ್ ಸಿಧು ಅವರಿಗೂ ಅಹ್ವಾನ ಕೊಡಲಾಗಿದೆ ಎಂದು ಕಾಂಗ್ರೆಸ್ ಮೂಲಗಳಿಂದ ಮಾಹಿತಿ ಹರಿದು ಬರುತ್ತಿದೆ. ಇದು ಪಂಜಾಬ್ನ ರಾಜಕೀಯದಲ್ಲಿ ದೊಡ್ಡ ಅಲೆಯನ್ನೇ ಎಬ್ಬಿಸಿದೆ ಎಂದರೆ ತಪ್ಪಾಗಲಾರದು. ಭಾರತ್ ಜೋಡೋ ಯಾತ್ರೆ ಪಂಜಾಬ್ ದಾಟಿ ಈಗಾಗಲೇ ಜಮ್ಮುವನ್ನು ಪ್ರವೇಶಿಸಿದೆ.
ಪಂಜಾಬ್ನ ಪಠಾಣ್ ಕೋಟ್ನಲ್ಲಿ ರ್‍ಯಾಲಿ ನಡೆದ ವೇಳೆ ಹೊರಗಿನಿಂದ ಬರುವವರಿಗೆ ಪಕ್ಷದಲ್ಲಿ ಯಾವುದೇ ದೊಡ್ಡ ಸ್ಥಾನವನ್ನು ನೀಡಬಾರದು ಎಂಬ ಹೇಳಿಕೆಯನ್ನು ಪ್ರತಾಪ್ ಸಿಂಗ್ ಬಾಜ್ವಾ, ರಾಜಾ ವಾರಿಂಗ್ ಮತ್ತು ಸುಖಜಿಂದರ್ ಸಿಂಗ್ ರಾಂಧವಾ ಒತ್ತಿ ಹೇಳಿದ್ದರು. ಇದು ಅಲ್ಲಿನ ಕಾಂಗ್ರೆಸ್ ವಲಯದಲ್ಲಿ ಭಾರಿ ಚರ್ಚೆಗೂ ಗ್ರಾಸವಾಗಿತ್ತು.
ಜೈಲಿನಲ್ಲಿರುವ ಸಿಧು ಅವರಿಗೆ ಆಹ್ವಾನ ನೀಡಿರುವುದು ಈಗ ಚರ್ಚೆಗೆ ಕಾರಣವಾಗಿದೆ. ರೋಡ್ ರೇಜ್ ಪ್ರಕರಣದಲ್ಲಿ ಪಟಿಯಾಲ ಜೈಲಿನಲ್ಲಿ ನವಜೋತ್ ಸಿಧು ಸಜೆಯಲ್ಲಿದ್ದಾರೆ. ಅವರ ಬಿಡುಗಡೆ ಬಗ್ಗೆ ಚರ್ಚೆಯೂ ನಡೆಯುತ್ತಿದೆ. ಸಿಧು ಬಿಡುಗಡೆ ಬಗ್ಗೆ ಯಾವುದೇ ನಿಖರತೆ ಇಲ್ಲದೇ ಕಾಂಗ್ರೆಸ್ ಆಹ್ವಾನ ನೀಡಿರುವುದು ವಿರೋಧ ಪಕ್ಷಗಳಿಗೆ ಪ್ರಶ್ನಾರ್ಹ ವಿಷಯವಾಗಿದೆ. ಜನವರಿ 26ರಂದು ಸಿಧು ಅವರು ಬಿಡುಗಡೆ ಆಗಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿದೆ. ಆದರೆ, ಈ ಬಗ್ಗೆ ಯಾವುದೇ ಆಧಿಕೃತ ಮಾಹಿತಿ ಇಲ್ಲ.