ಅಮೃತಸರ(ಪಂಜಾಬ್):ಚುನಾವಣೆಗಳು ಸಮೀಪಿಸುತ್ತಿದ್ದಂತೆ ಎಲ್ಲ ಪಕ್ಷಗಳು ಗೆಲುವಿಗಾಗಿ ಕಸರತ್ತು ನಡೆಸುತ್ತಿವೆ. ಇನ್ನೂ ಕೆಲವೊಂದು ರಾಜ್ಯಗಳಲ್ಲಿ ಸಿಎಂ ಅಭ್ಯರ್ಥಿ ಘೋಷಣೆ ವಿಚಾರವಾಗಿ ಮುಸುಕಿನ ಗುದ್ದಾಟಗಳೂ ನಡೆಯುತ್ತಿವೆ. ಪಂಜಾಬ್ನಲ್ಲೂ ಚುನಾವಣಾ ತಯಾರಿ ಬೆನ್ನಲ್ಲೇ ಸಿಎಂ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಕೆಲವರಲ್ಲಿ ಮುನಿಸು ಸೃಷ್ಟಿಯಾಗಿದೆ.
ಹೌದು, ಪಂಜಾಬ್ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಈಗಾಗಲೇ ಸಿಎಂ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಈಗಾಗಲೇ ಚರಣ್ಜೀತ್ ಚನ್ನಿ ಅವರನ್ನು ಪಂಜಾಬ್ ಸಿಎಂ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್ ಘೋಷಿಸಿದ್ದು, ಪಂಜಾಬ್ ಪಿಸಿಸಿ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರ ಪುತ್ರಿ ರಬಿಯಾ ಕೌರ್ ಸಿಧು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ತಂದೆ ಗೆಲ್ಲುವವರೆ ವಿವಾಹವಾಗುವುದಿಲ್ಲ:ತಂದೆಯ ಪರ ಗುರುವಾರ ಅಮೃತಸರ (ಪೂರ್ವ) ಕ್ಷೇತ್ರದಲ್ಲಿ ಪ್ರಚಾರ ನಡೆಸುವ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿಎಂ ಚನ್ನಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾವು ಹೇಳಿಕೊಂಡಂತೆ ಚನ್ನಿ ನಿಜವಾಗಿಯೂ ಬಡವರಾ? ಅವರ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿ, 133 ಕೋಟಿ ರೂಪಾಯಿಗೂ ಹೆಚ್ಚು ಹಣ ಪತ್ತೆಯಾಗಲಿದೆ ಎಂದು ರಬಿಯಾ ಹೇಳಿದ್ದಾರೆ.
ಪಂಜಾಬ್ ಕೆಟ್ಟ ಪರಿಸ್ಥಿತಿಯಲ್ಲಿದ್ದು, ತನ್ನ ತಂದೆ ಮಾತ್ರ ಪಂಜಾಬ್ ಅನ್ನು ಉಳಿಸಬಲ್ಲರು. ಡ್ರಗ್ ಮಾಫಿಯಾ ಮತ್ತು ಮರಳು ಮಾಫಿಯಾ ಎಲ್ಲವೂ ತನ್ನ ತಂದೆಗೆ ವಿರುದ್ಧವಿದೆ ಎಂದ ರಬಿಯಾ ನನ್ನ ತಂದೆ ಗೆಲುವು ಸಾಧಿಸುವವರೆಗೆ ನಾನು ವಿವಾಹವಾಗುವುದಿಲ್ಲ ಎಂದು ಪಣ ತೊಟ್ಟಿದ್ದಾರೆ.