ನವದೆಹಲಿ :ಇತ್ತೀಚಿಗೆ ಚುನಾವಣೆ ಮುಗಿದ ಪಂಚ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು ರಾಜೀನಾಮೆ ನೀಡಿ ಎಂದು ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಸೂಚಿಸಿದ ಬೆನ್ನಲ್ಲೇ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಮತ್ತು ಮಣಿಪುರ ಕಾಂಗ್ರೆಸ್ ಅಧ್ಯಕ್ಷ ಲೋಕೇನ್ ಸಿಂಗ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಉತ್ತರಪ್ರದೇಶ, ಪಂಜಾಬ್, ಉತ್ತರಾಖಂಡ್, ಗೋವಾ ಮತ್ತು ಮಣಿಪುರ ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿದೆ. ಪಂಜಾಬ್ನಲ್ಲಿ ಅಧಿಕಾರವನ್ನೇ ಕಳೆದುಕೊಂಡಿರುವ ಕಾಂಗ್ರೆಸ್ ಉತ್ತರಪ್ರದೇಶದಲ್ಲಿ ಕೇವಲ ಎರಡು, ಗೋವಾದಲ್ಲಿ 11, ಉತ್ತರಾಖಂಡ್ನಲ್ಲಿ 19 ಹಾಗೂ ಮಣಿಪುರದಲ್ಲಿ 5 ಸ್ಥಾನಗಳನ್ನು ಮಾತ್ರ ಪಡೆದಿದೆ. ಹೀಗಾಗಿ, ಮಂಗಳವಾರ ಸೋನಿಯಾ ಗಾಂಧಿ ಐದು ರಾಜ್ಯಗಳ ಕಾಂಗ್ರೆಸ್ ಅಧ್ಯಕ್ಷರಿಗೆ ರಾಜೀನಾಮೆ ನೀಡುವಂತೆ ಸೂಚಿಸಿದ್ದರು.
ಅಂತಯೇ, ಬುಧವಾರ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ರಾಜೀನಾಮೆ ಪತ್ರವನ್ನು ಸೋನಿಯಾ ಗಾಂಧಿಗೆ ರವಾನಿಸಿದ್ದಾರೆ. ಅದೇ ರೀತಿಯಾಗಿ ಮಣಿಪುರದ ಅಧ್ಯಕ್ಷ ಲೋಕೇನ್ ಸಿಂಗ್ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ.