'ಭಾರತದ ಯೂತ್ ಐಕಾನ್' ಶ್ರೀ ಸ್ವಾಮಿ ವಿವೇಕಾನಂದರು ರಾಷ್ಟ್ರ ನಿರ್ಮಾಣದ ಆಧಾರಸ್ತಂಭವಾಗಿರುವ ಲಕ್ಷಾಂತರ ಯುವಕರನ್ನು ಉತ್ತೇಜಿಸಲು ಮತ್ತು ಪ್ರೇರೇಪಿಸಲು ಉತ್ಕೃಷ್ಟ ಭಾಷಣಗಳನ್ನು ಮಾಡಿದ್ದಾರೆ. ಯುವಕರಿಗೆ ಅವರು ನೀಡಿದ ಸ್ಪೂರ್ತಿದಾಯಕ ಸಲಹೆಯನ್ನು ನೆನಪಿಸಿಕೊಳ್ಳುವುದು ಒಂದು ದೊಡ್ಡ ಅವಕಾಶ ಮತ್ತು ಹೆಮ್ಮೆಯಾಗಿದೆ. ನೀವು ಏನು ಯೋಚಿಸುತ್ತೀರೋ, ಅದೇ ನೀವಾಗುತ್ತೀರಿ ಎಂಬ ಸ್ವಾಮಿ ವಿವೇಕಾನಂದರ ಮಾತು ನಮಗೆಲ್ಲ ಸ್ಫೂರ್ತಿ.
"ನಿಮ್ಮನ್ನು ನೀವು ದುರ್ಬಲರು ಎಂದು ಭಾವಿಸಿದರೆ ನೀವು ದುರ್ಬಲರೇ ಆಗುವಿರಿ. ನಿಮ್ಮನ್ನು ನೀವು ಬಲಶಾಲಿ ಎಂದು ಭಾವಿಸಿದರೆ ನೀವು ಬಲಶಾಲಿಯೇ ಆಗುವಿರಿ." "ನೀವು ಗುಲಾಮರಾಗಿ ಕೆಲಸ ಮಾಡದೆ ಯಜಮಾನನಂತೆ ಕೆಲಸ ಮಾಡಬೇಕು, ನಿರಂತರವಾಗಿ ಕೆಲಸ ಮಾಡಬೇಕು, ಆದರೆ ಗುಲಾಮನ ರೀತಿ ಕೆಲಸ ಮಾಡಬಾರದು", "ಇಲ್ಲ ಎಂದು ಎಂದಿಗೂ ಹೇಳಬೇಡಿ, ನನ್ನಿಂದ ಸಾಧ್ಯವಿಲ್ಲ ಎಂದು ಎಂದಿಗೂ ಹೇಳಬೇಡಿ, ಏಕೆಂದರೆ ನೀವು ಅನಂತರು", "ಎಲ್ಲಾ ಶಕ್ತಿ ನಿಮ್ಮೊಳಗೆ ಇದೆ. ನೀವು ಏನು ಬೇಕಾದರೂ ಮಾಡಬಹುದು". ಸ್ವಾಮಿ ವಿವೇಕಾನಂದರ ಈ ಎಲ್ಲ ಮಾತುಗಳು ಯುವಜನತೆಗೆ ನಿರಂತರ ಸ್ಫೂರ್ತಿಯ ಸೆಲೆಯಾಗಿವೆ.
ಸ್ವಾಮಿ ವಿವೇಕಾನಂದರು ಯುವಕರಿಗೆ ನಿಜವಾದ ಸ್ಫೂರ್ತಿಯ ಮೂಲವಾಗಿದ್ದಾರೆ. ಯುವಕರು ದೇಶದ ದೊಡ್ಡ ಆಸ್ತಿ ಮತ್ತು ಬೆನ್ನೆಲುಬು ಎಂಬುದು ವಿವೇಕಾನಂದರ ಅಭಿಪ್ರಾಯವಾಗಿದೆ. ಯಾವುದೇ ದೇಶದ ಭವಿಷ್ಯವು ಯುವಕರನ್ನು ಆ ದೇಶ ಹೇಗೆ ಪೋಷಿಸುತ್ತದೆ, ಪ್ರೇರೇಪಿಸುತ್ತದೆ, ಶಿಕ್ಷಣ ನೀಡುತ್ತದೆ ಮತ್ತು ಕೌಶಲ್ಯ ತುಂಬಿ ಬುದ್ಧಿವಂತ ಮತ್ತು ಜ್ಞಾನಯುತರನ್ನಾಗಿ ಮಾಡುತ್ತದೆ ಎಂಬುದರ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ.
ರಾಷ್ಟ್ರೀಯ ಯುವ ದಿನ: ಮಹಾನ್ ಆಧ್ಯಾತ್ಮಿಕ ನಾಯಕ ಮತ್ತು ತತ್ವಜ್ಞಾನಿ ಸ್ವಾಮಿ ವಿವೇಕಾನಂದರನ್ನು ಗೌರವಿಸುವ ಉದ್ದೇಶದಿಂದ ರಾಷ್ಟ್ರೀಯ ಯುವ ದಿನ ಆಚರಿಸಲಾಗುತ್ತದೆ. ಭಾರತದ ಯುವಕರನ್ನು ಸ್ವಾಮಿ ವಿವೇಕಾನಂದರ ಮಾತುಗಳಿಂದ ಪ್ರೇರೇಪಿಸಲು ಮತ್ತು ಅವರನ್ನು ಹೆಚ್ಚು ಕೌಶಲ್ಯಯುತ, ಜ್ಞಾನಯುತರನ್ನಾಗಿ ಮಾಡುವುದು ಈ ದಿನಾಚರಣೆಯ ಆಶಯವಾಗಿದೆ. ವಿವೇಕಾನಂದರ ಜನ್ಮದಿನದ ನೆನಪಿಗಾಗಿ ಭಾರತವು 1985 ರಿಂದ ಪ್ರತಿವರ್ಷ ಜನವರಿ 12 ರಂದು ರಾಷ್ಟ್ರೀಯ ಯುವ ದಿನವನ್ನು ಆಚರಿಸಿಕೊಂಡು ಬರುತ್ತಿದೆ.
1984 ರಿಂದ, ಭಾರತ ಸರ್ಕಾರವು ಮಹಾನ್ ಭಾರತೀಯ ಹಿಂದೂ ಸನ್ಯಾಸಿ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ಪ್ರತಿವರ್ಷ ಜನವರಿ 12 ರಂದು ರಾಷ್ಟ್ರೀಯ ಯುವ ದಿನವಾಗಿ (ಯುವ ದಿವಸ್) ಆಚರಿಸಲು ನಿರ್ಧರಿಸಿದೆ. ಇದಲ್ಲದೇ, ರಾಷ್ಟ್ರೀಯ ಯುವ ದಿನವು ಜಾಗತಿಕ ಬದಲಾವಣೆಗಳ ಹಿನ್ನೆಲೆಯಲ್ಲಿ ತಮ್ಮ ಜೀವನೋಪಾಯಕ್ಕಾಗಿ ಯುವಕರ ಪ್ರಾಯೋಗಿಕ ಸಮಸ್ಯೆಗಳು, ಸಾಮರ್ಥ್ಯಗಳು, ದೌರ್ಬಲ್ಯಗಳು ಮತ್ತು ಸವಾಲುಗಳನ್ನು ಪರಿಶೀಲಿಸಲು ಮತ್ತು ಅವರ ಯೋಗಕ್ಷೇಮಕ್ಕಾಗಿ ಕ್ಷೇತ್ರಗಳಾದ್ಯಂತ ಅವರ ಸಮಸ್ಯೆಗಳನ್ನು ಪರಿಹರಿಸಲು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಮುದಾಯದಿಂದ ವಿಶೇಷ ಗಮನವನ್ನು ಸೆಳೆಯುವ ಉದ್ದೇಶ ಹೊಂದಿದೆ.
ಯುವ ಸಾಮರ್ಥ್ಯ ಮತ್ತು ಸಬಲೀಕರಣ, ಈಗಿನ ಅಗತ್ಯ: ಭಾರತದ ಆರ್ಥಿಕ ಬೆಳವಣಿಗೆಯು ಭಾರತವು ತನ್ನ ಯುವಕರನ್ನು ಹೇಗೆ ಪೋಷಿಸುತ್ತದೆ ಎಂಬುದರ ಮೇಲೆ ಅವಲಂಬಿತವಾಗಿದೆ. ಬಲಶಾಲಿಯಾದ ರಾಷ್ಟ್ರ ನಿರ್ಮಾಣದಲ್ಲಿ ಯುವಕರು ಪ್ರಮುಖ ಪಾತ್ರ ವಹಿಸುತ್ತಾರೆ. ವಿಶ್ವದಾದ್ಯಂತ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (ಎಸ್ಡಿಜಿ) (17 ಎಸ್ಡಿಜಿ) ಸಾಧಿಸುವಲ್ಲಿ ವಿಶ್ವಸಂಸ್ಥೆ ಯುವಕರಿಗೆ ಪ್ರಮುಖ ಪಾತ್ರವನ್ನು ವಹಿಸಿದೆ. ವಿಶ್ವಸಂಸ್ಥೆಯ ಎಸ್ಡಿಜಿಗಳ 2030 ರ ಕಾರ್ಯಸೂಚಿಯ ಹೊಣೆ ಯುವಕರ ಮೇಲಿದೆ.
ಭಾರತವು ವಿಶ್ವದ ಅತಿದೊಡ್ಡ ಯುವ ಜನಸಂಖ್ಯೆಯನ್ನು ಹೊಂದಿದೆ ಮತ್ತು 2030 ರ ವೇಳೆಗೆ 365 ಮಿಲಿಯನ್ 15 ರಿಂದ 29 ವರ್ಷ ವಯಸ್ಸಿನ ಜನಸಂಖ್ಯೆಯನ್ನು ಹೊಂದುವ ಮೂಲಕ ತುಲನಾತ್ಮಕವಾಗಿ ಯುವ ದೇಶವಾಗಲಿದೆ. 35 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸುಮಾರು 808 ಮಿಲಿಯನ್ ಜನರನ್ನು (ಒಟ್ಟು ಜನಸಂಖ್ಯೆಯ 66%) ಹೊಂದಿರುವ ಭಾರತ ವಿಶ್ವದ ಬೃಹತ್ ಸಂಭಾವ್ಯ ಯುವ ಜನಸಂಖ್ಯೆಯನ್ನು ಹೊಂದಿದೆ. (ರಾಷ್ಟ್ರೀಯ ಯುವ ನೀತಿ, ಆಗಸ್ಟ್ 2022).
ರಾಷ್ಟ್ರೀಯ ಯುವ ನೀತಿಯು ವಿಶ್ವಸಂಸ್ಥೆ ಎಸ್ಡಿಜಿಗಳೊಂದಿಗೆ ಹೊಂದಿಕೆಯಾಗಿದೆ. ಇದು ಮುಖ್ಯವಾಗಿ ಶಿಕ್ಷಣದಲ್ಲಿ ಗುಣಮಟ್ಟ, ಅಸಮಾನತೆ ಕಡಿತ, ಯೋಗ್ಯ ಕೆಲಸದ ವಾತಾವರಣ ಮತ್ತು ಆರ್ಥಿಕ ಬೆಳವಣಿಗೆಯನ್ನು ಒಳಗೊಂಡಿದೆ. "ಯೂತ್ ಇನ್ ಇಂಡಿಯಾ 2022" ವರದಿಯ ಪ್ರಕಾರ 15 ರಿಂದ 29 ವರ್ಷ ವಯಸ್ಸಿನ ಯುವಕರ (2021 ರ ವೇಳೆಗೆ ಜನಸಂಖ್ಯೆಯ 27.2%) ಸಂಖ್ಯೆಯು 2036 ರ ವೇಳೆಗೆ 22.7% ಕ್ಕೆ ಇಳಿಯುವ ನಿರೀಕ್ಷೆಯಿದೆ. ಆದರೆ, 2021-2036 ರ ಅವಧಿಯಲ್ಲಿ ಹಿರಿಯರ ಪಾಲು ಹೆಚ್ಚಾಗುವ ನಿರೀಕ್ಷೆಯಿದೆ. ಒಟ್ಟು ಯುವ ಜನಸಂಖ್ಯೆಯು 1991 ರಲ್ಲಿ 222.7 ಮಿಲಿಯನ್ ನಿಂದ 2011 ರಲ್ಲಿ 333.4 ಮಿಲಿಯನ್ ಗೆ ಏರಿದೆ ಮತ್ತು 2022 ರ ವೇಳೆಗೆ 400.0 ಮಿಲಿಯನ್ ತಲುಪುವ ನಿರೀಕ್ಷೆಯಿದೆ. ಈ ಸಂಖ್ಯೆ 2036 ರ ವೇಳೆಗೆ 345.5 ಮಿಲಿಯನ್ ಗೆ ಇಳಿಯಲಿದೆ.
ಯುವಜನತೆಯ ಸಮಸ್ಯೆಗಳು: ವಿಶ್ವ ಯುವ ವರದಿ (ಡಬ್ಲ್ಯುವೈಆರ್)ಯ ಪ್ರಕಾರ ಸುಮಾರು 200 ಮಿಲಿಯನ್ ಯುವಕರು ಬಡತನದಲ್ಲಿದ್ದಾರೆ, 130 ಮಿಲಿಯನ್ ಯುವಕರು ಅನಕ್ಷರಸ್ಥರಾಗಿದ್ದಾರೆ ಮತ್ತು 88 ಮಿಲಿಯನ್ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಹಾಗೆಯೇ 10 ಮಿಲಿಯನ್ ಯುವಕರು ಎಚ್ಐವಿ / ಏಡ್ಸ್ನಿಂದ ಬಳಲುತ್ತಿದ್ದಾರೆ, 500 ದಶಲಕ್ಷಕ್ಕೂ ಹೆಚ್ಚು ಯುವಕರು ದಿನಕ್ಕೆ 2 ಡಾಲರ್ಗಿಂತ ಕಡಿಮೆ ಆದಾಯದಲ್ಲಿ ಬದುಕುತ್ತಿದ್ದಾರೆ, 113 ಮಿಲಿಯನ್ ಯುವಕರು ಶಾಲೆಯಿಂದ ಹೊರಗುಳಿದಿದ್ದಾರೆ. ಈ ಎಲ್ಲ ಸಮಸ್ಯೆಗಳು ದೊಡ್ಡ ಸವಾಲುಗಳಾಗಿವೆ. ಶಿಕ್ಷಣಕ್ಕೆ ಸೀಮಿತ ಪ್ರವೇಶ, ಲಾಭದಾಯಕ ಉದ್ಯೋಗ, ಉದ್ಯೋಗ ಭದ್ರತೆ, ತಂತ್ರಜ್ಞಾನದ ಅಡೆತಡೆಗಳು, ಕೌಶಲ್ಯ ನವೀಕರಣ, ಲಿಂಗ ಸಮಾನತೆ, ಕೆಲಸದಲ್ಲಿ ಒತ್ತಡ, ಖಿನ್ನತೆ, ಶೋಷಣೆ, ಕೆಲಸದ ತೃಪ್ತಿಯ ಕೊರತೆ ಸೇರಿದಂತೆ ಇನ್ನೂ ಏನೇನೋ ಇವೆ...
ನಿರುದ್ಯೋಗವು ಎಲ್ಲ ದೇಶಗಳಲ್ಲೂ ಪ್ರಮುಖ ಸಮಸ್ಯೆಯಾಗಿದೆ. ಭಾರತವೂ ಇದರಿಂದ ಹೊರತಾಗಿಲ್ಲ. ಫೋರ್ಬ್ಸ್ ಇಂಡಿಯಾ, (ನವೆಂಬರ್ 1, 2023), ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಮ್ಐಇ), ನವೆಂಬರ್ 2023ರ ಅಂಕಿ - ಅಂಶಗಳ ಪ್ರಕಾರ, ಭಾರತದಲ್ಲಿ ನಿರುದ್ಯೋಗ ದರವು ಇತ್ತೀಚಿನ ದಿನಗಳಲ್ಲಿ ಗರಿಷ್ಠ ಮಟ್ಟಕ್ಕೆ ಏರಿದೆ. ಭಾರತದಲ್ಲಿ ಒಟ್ಟಾರೆ ನಿರುದ್ಯೋಗ ದರವು ಜುಲೈ 2023 ರಲ್ಲಿ 7.95% ರಷ್ಟಿತ್ತು. 2023 ರ ಅಕ್ಟೋಬರ್ನಲ್ಲಿ ಇದು 10.05% ಕ್ಕೆ ಏರಿತು. ಇದು 2022 ರಲ್ಲಿ 7.33%, 2021 ರಲ್ಲಿ 5.98% ಮತ್ತು 2020 ರಲ್ಲಿ 8.00% ರಷ್ಟಿತ್ತು. ಸಿಎಮ್ಐಇ ಪ್ರಕಾರ ಯುವಕರು ತೀವ್ರತರವಾದ ನಿರುದ್ಯೋಗ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಏಕೆಂದರೆ ಯುವಕರ ನಿರುದ್ಯೋಗ ದರವು (15 - 24 ವರ್ಷ ವಯಸ್ಸಿನವರು) 2022-23ರಲ್ಲಿ 45.4% ರಷ್ಟಿತ್ತು. ಇದು ಆತಂಕಕಾರಿ ಮಟ್ಟದಲ್ಲಿದೆ.
ಸೇಪಿಯನ್ ಲ್ಯಾಬ್ಸ್ ಸೆಂಟರ್ ಫಾರ್ ಹ್ಯೂಮನ್ ಬ್ರೈನ್ ಅಂಡ್ ಮೈಂಡ್ ನಡೆಸಿದ ಇಂಟರ್ನೆಟ್-ಎನೇಬಲ್ಡ್ ಯೂತ್ 2023 ರ ವರದಿಯ ಪ್ರಕಾರ ಶೇ 51ರಷ್ಟು ಯುವಕರು ಮಾನಸಿಕ ತೊಂದರೆಯಲ್ಲಿದ್ದಾರೆ ಅಥವಾ ಹೆಣಗಾಡುತ್ತಿದ್ದಾರೆ. ಅಂದರೆ ಅವರು 0 ಗಿಂತ ಕಡಿಮೆ ಮಾನಸಿಕ ಆರೋಗ್ಯ ಮಟ್ಟವನ್ನು (ಎಂಎಚ್ಕ್ಯೂ) ಹೊಂದಿದ್ದಾರೆಂದು ಸೂಚಿಸುತ್ತದೆ. ಇಂಟರ್ನೆಟ್-ಸಕ್ರಿಯ ಯುವ ಜನಸಂಖ್ಯೆಯ ಮಾನಸಿಕ ಆರೋಗ್ಯವು 2020 ರಿಂದ 2023 ರವರೆಗೆ ಎಲ್ಲಾ ವಯೋಮಾನದವರಲ್ಲಿ (www. thehindubusinessline. com) ಕುಸಿದಿದೆ ಎಂದು ವರದಿ ಹೇಳಿದೆ. ಭಾರತೀಯ ಯುವಕರು ಬಹುಮುಖಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಮಾಡಬೇಕಾಗಿರುವುದೇನು?
1) ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ತರಬೇತಿ ಪಡೆಯಲು ಮತ್ತು ಅಗತ್ಯ ಜ್ಞಾನ ಮತ್ತು ಕೌಶಲ್ಯಗಳೊಂದಿಗೆ ಸಜ್ಜುಗೊಳ್ಳಲು ಯುವಕರು ಮುಂದಾಗಬೇಕು.