ಪ್ರತಿ ವರ್ಷ ಜನವರಿ 12ನ್ನು 'ರಾಷ್ಟ್ರೀಯ ಯುವ ದಿನ'ವನ್ನಾಗಿ ಆಚರಿಸಲಾಗುತ್ತದೆ. ಯುವಕರು ಮಾನಸಿಕ, ಬೌದ್ಧಿಕ ಮತ್ತು ದೈಹಿಕವಾಗಿ ಸದೃಢವಾಗಿರಲು ಪ್ರೇರೇಪಿಸಿದ ಸ್ವಾಮಿ ವಿವೇಕಾನಂದರಿಗೆ ಈ ದಿನ ಸಮರ್ಪಿತವಾಗಿದೆ. ಜಗತ್ತಿಗೆ ಮೊದಲ ಬಾರಿಗೆ ತತ್ವಶಾಸ್ತ್ರ ಮತ್ತು ಆಧ್ಯಾತ್ಮಿಕತೆಯನ್ನು ಪರಿಚಯಿಸಿದ ವೀರ ಸನ್ಯಾಸಿಯ ಹುಟ್ಟಿದ ದಿನವನ್ನೇ 'ರಾಷ್ಟ್ರೀಯ ಯುವ ದಿನ'ವನ್ನಾಗಿ ಸಂಭ್ರಮಿಸಲಾಗುತ್ತದೆ.
'ರಾಷ್ಟ್ರೀಯ ಯುವ ದಿನ'ದ ಇತಿಹಾಸ:ವಿಶ್ವಸಂಸ್ಥೆ 1984ರಲ್ಲಿ ಜ.12 ಅನ್ನು ಅಂತಾರಾಷ್ಟ್ರೀಯ ಯುವ ದಿನವನ್ನಾಗಿ ಘೋಷಣೆ ಮಾಡಿತ್ತು. ಇದರಿಂದ ಪ್ರೇರಿತವಾದ ಭಾರತ ಸರ್ಕಾರ ಅದೇ ವರ್ಷ ಯುವ ದಿನಾಚರಿಸಲು ನಿರ್ಧರಿಸಿತು. 1984ರಲ್ಲಿ ಕೇಂದ್ರದಿಂದ ಗೊತ್ತುಪಡಿಸಿದ 'ರಾಷ್ಟ್ರೀಯ ಯುವ ದಿನ'ದಂದು ದೂರದೃಷ್ಟಿಯ ಶ್ರೇಷ್ಠ ನಾಯಕ ಸ್ವಾಮಿ ವಿವೇಕಾನಂದರಿಗೆ ವಿಶೇಷ ಗೌರವ ಸಲ್ಲಿಸಲಾಗುತ್ತದೆ. ವಿವೇಕಾನಂದರು ಭಾರತ ಮಾತ್ರವಲ್ಲದೇ ಪ್ರಪಂಚಾದ್ಯಂತ ಯುವಕರನ್ನು ಪ್ರೇರೇಪಿಸುವ ಮತ್ತು ಮಾರ್ಗದರ್ಶನ ನೀಡುವಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ವಿವೇಕಾನಂದರ ಬೋಧನೆಗಳು ಇಂದೂ ಎಲ್ಲೆಡೆ ಪ್ರತಿಧ್ವನಿಸುತ್ತಲೇ ಇವೆ. ಸಮಾಜ ಮತ್ತು ರಾಷ್ಟ್ರದ ಒಳಿತಿಗಾಗಿ ಯುವ ಶಕ್ತಿಯನ್ನು ಪರಿಣಾಮಕಾರಿಯಾಗಿ ಬಳಸುವ ಪ್ರಾಮುಖ್ಯತೆಯನ್ನು ಈ ದಿನಾಚರಣೆ ಒತ್ತಿಹೇಳುತ್ತದೆ.
ವಿವೇಕಾನಂದರ ಕುಟುಂಬ: ಸ್ವಾಮಿ ವಿವೇಕಾನಂದರು ಜನವರಿ 12, 1863ರಂದು ಕೋಲ್ಕತ್ತಾದಲ್ಲಿ ಜನಿಸಿದರು. ಪೋಷಕರು ಮಗನಿಗೆ ನರೇಂದ್ರ ಎಂದು ಹೆಸರಿಟ್ಟಿದ್ದರು. ತಂದೆ ಹೈಕೋರ್ಟ್‌ನ ಜನಪ್ರಿಯ ವಕೀಲ ವಿಶ್ವನಾಥ ದತ್ತಾ. ತಮ್ಮ ಮಗನಿಗೆ ಇಂಗ್ಲಿಷ್ ಶಿಕ್ಷಣ ನೀಡಿ ಶ್ರೇಷ್ಠ ವ್ಯಕ್ತಿಯಾಗಿಸಬೇಕೆಂಬ ಹಂಬಲ ಅವರದ್ದಾಗಿತ್ತು. ಅದರಂತೆಯೇ ಅವರು ಮಗನಿಗೆ ಉತ್ತಮ ಶಿಕ್ಷಣ ಒದಗಿಸಿದ್ದರು.
ವಿವೇಕಾನಂದರ ಜೀವನ ಪಯಣ:ಸ್ವಾಮಿ ವಿವೇಕಾನಂದರು ತಮ್ಮ ಯೌವನದಲ್ಲಿ ಸಂಗೀತ, ಜಿಮ್ನಾಸ್ಟಿಕ್ಸ್ ಮತ್ತು ಶಿಕ್ಷಣದಲ್ಲಿ ಅಸಾಧಾರಣ ಕೌಶಲ್ಯ ಹೊಂದಿದ್ದರು. ಆಧ್ಯಾತ್ಮಿಕ ಗುರುಗಳಾದ ರಾಮಕೃಷ್ಣ ಪರಮಹಂಸರನ್ನು ಭೇಟಿಯಾದ ನಂತರ ಅವರ ಆಧ್ಯಾತ್ಮಿಕ ಪ್ರಯಾಣವು ಅಧಿಕೃತವಾಗಿ 1881ರಲ್ಲಿ ಪ್ರಾರಂಭವಾಯಿತು.
ಒಮ್ಮೆ ವಿವೇಕಾನಂದರು ರಾಮಕೃಷ್ಣ ಪರಮಹಂಸರನ್ನು, ನೀವು ಎಂದಾದರೂ ದೇವರನ್ನು ನೋಡಿದ್ದೀರಾ ಎಂದು ಪ್ರಶ್ನಿಸಿದ್ದರಂತೆ. ಇದಕ್ಕೆ ಅರೆಕ್ಷಣವೂ ಯೋಚಿಸದೇ ಅವರು ಉತ್ತರಿಸುತ್ತಾರೆ. ಹೌದು, ನಾನು ದೇವರನ್ನು ನೋಡಿದ್ದೇನೆ. ನಾನು ನಿನ್ನನ್ನು ಇಲ್ಲಿ ನೋಡುವಂತೆ ಅವನನ್ನೂ ಸ್ಪಷ್ಟವಾಗಿ ನೋಡುತ್ತೇನೆ. ದೇವರನ್ನು ಕಾಣಬಹುದು, ಅವನೊಂದಿಗೆ ಮಾತನಾಡಬಹುದು. ಆದರೆ ದೇವರ ಬಗ್ಗೆ ಯಾರಿಗೆ ಕಾಳಜಿ ಇದೆ?. ಜನರು ತಮ್ಮ ಹೆಂಡತಿ, ಮಕ್ಕಳು ಮತ್ತು ಆಸ್ತಿಗಾಗಿ ಕಣ್ಣೀರು ಸುರಿಸುತ್ತಿರುತ್ತಾರೆ. ಆದರೆ ದೇವರ ದರ್ಶನಕ್ಕಾಗಿ ಯಾರು ಕಣ್ಣೀರು ಹಾಕುತ್ತಾರೆ?. ಯಾರು ದೇವರನ್ನು ಅತ್ಯಂತ ಪ್ರಾಮಾಣಿಕವಾಗಿ ಕೂಗಿ ಕರೆಯುವರೋ ಅವರು ಖಂಡಿತವಾಗಿಯೂ ದೇವರನ್ನು ನೋಡಬಹುದು ಎಂದು ಅವರು ಹೇಳಿದ್ದರಂತೆ.
ವಿವೇಕಾನಂದರ ಜಗತ್ತ್ರಸಿದ್ಧ ಚಿಕಾಗೋ ಭಾಷಣ: ವಿವೇಕಾನಂದರು 1893ರ ಸೆಪ್ಟೆಂಬರ್ 11ರಂದು ಅಮೆರಿಕದ ಚಿಕಾಗೋದಲ್ಲಿ ಮಾಡಿದ ಐತಿಹಾಸಿಕ ಭಾಷಣ ಭಾರತದ ಇತಿಹಾಸದ ಪುಟಗಳಲ್ಲಿ ಮರೆಯಲಾಗದ ಸಂಗತಿ. ಅದು ಹಿಂದೂ ಧರ್ಮದ ಸಾಹಸ ಯಾತ್ರೆಯೇ ಆಗಿತ್ತು. ವಿಭಿನ್ನ ಜಾತಿ, ಮತಗಳ ಮಾನವ ಸಂಕುಲವನ್ನು ಒಂದೇ ಗೂಡಿನಲ್ಲಿ ಪೋಷಿಸುತ್ತಿರುವ ಭಾರತವನ್ನು ಪ್ರತಿನಿಧಿಸಿದ್ದ ವಿವೇಕಾನಂದರು ಮಾಡಿದ ಭಾಷಣ ಸ್ವಾಭಿಮಾನ, ಧರ್ಮಜಾಗೃತಿಯನ್ನು ಬಡಿದೆಬ್ಬಿಸುವಂತಿತ್ತು. "ಅಮೆರಿಕದ ಸಹೋದರಿಯರು ಮತ್ತು ಸಹೋದರರು" ಎಂಬ ಪ್ರಸಿದ್ಧ ಆರಂಭಿಕ ಮಾತುಗಳೊಂದಿಗೆ ಅವರು ಹಿಂದೂ ಧರ್ಮ ಮತ್ತು ಭಾರತೀಯರು, ಭಾರತೀಯತೆಯನ್ನು ಇಡೀ ಜಗತ್ತಿಗೆ ಪರಿಚಯಿಸಿದ್ದರು.
- ಚಿಕಾಗೋ ಭಾಷಣದ ಪ್ರಮುಖ ಅಂಶಗಳು:
- "ನಾನು ಜಗತ್ತಿಗೆ ಸಹಿಷ್ಣುತೆ ಮತ್ತು ಸಾರ್ವತ್ರಿಕ ಮೌಲ್ಯಗಳು ಎರಡನ್ನೂ ಕಲಿಸಿದ ಧರ್ಮಕ್ಕೆ ಸೇರಿದವನು ಎಂದು ಹೇಳಲು ಹೆಮ್ಮೆಪಡುತ್ತೇನೆ."
- "ನಾವು ಸಾರ್ವತ್ರಿಕ ಸಹಿಷ್ಣುತೆಯನ್ನು ನಂಬುತ್ತೇವೆ. ಆದರೆ ಎಲ್ಲಾ ಧರ್ಮಗಳನ್ನೂ ಸತ್ಯವೆಂದು ಒಪ್ಪಿಕೊಳ್ಳುತ್ತೇವೆ."
- "ಭಯಂಕರ ಧರ್ಮಾಂಧತೆಯ ರಾಕ್ಷಸರು ಇಲ್ಲದಿದ್ದರೆ ಮಾನವ ಸಮಾಜ ಈಗ ಇರುವುದಕ್ಕಿಂತ ಎಷ್ಟೋ ಪಾಲು ಮುಂದುವರಿಯುತ್ತಿತ್ತು. ಆದರೀಗ ಅವರ ಕಾಲ ಮುಗಿದಿದೆ. ಖಡ್ಗ ಇಲ್ಲವೇ, ಲೇಖನಿಯಿಂದ ಸಾಧಿಸಿದ ಮತೀಯ ಹಿಂಸೆಗಳು, ಒಂದೇ ಗುರಿಯೆಡೆಗೆ ಸಾಗುತ್ತಿದ್ದರೂ ಪಥಿಕರಲ್ಲಿ ತಲೆದೋರುತ್ತಿರುವ ಅನಾದಾರವಾದ ಎಲ್ಲ ಮನಸ್ತಾಪಗಳ ಅಂತ್ಯಕ್ರಿಯೆಯನ್ನು ಸೂಚಿಸುವ ಘಂಟಾನಾದವೂ ಆಗಲಿ ಎಂಬುದೇ ನನ್ನ ಆಶಯ."
- "ಕ್ರಿಶ್ಚಿಯನ್, ಹಿಂದೂ ಅಥವಾ ಬೌದ್ಧನಾಗಲು ಅಲ್ಲ ಅಥವಾ ಹಿಂದೂ ಅಥವಾ ಬೌದ್ಧ ಕ್ರಿಶ್ಚಿಯನ್ ಆಗಲು ಅಲ್ಲ. ಆದರೆ ಪ್ರತಿಯೊಬ್ಬರೂ ಇತರರ ಆತ್ಮವನ್ನು ಸಂಯೋಜಿಸಬೇಕು ಮತ್ತು ತನ್ನ ವ್ಯಕ್ತಿತ್ವವನ್ನು ಕಾಪಾಡಿಕೊಳ್ಳಬೇಕು. ತನ್ನದೇ ಆದ ಬೆಳವಣಿಗೆಯ ನಿಯಮದ ಪ್ರಕಾರ ಬೆಳೆಯಬೇಕು."
- "ಬೇರೆ ಬೇರೆ ಕಡೆಗಳಲ್ಲಿ ಹುಟ್ಟಿದ ನದಿಗಳು ಕೊನೆಗೆ ಸಾಗರದಲ್ಲಿ ಸಂಗಮಗೊಳ್ಳುವಂತೆ, ದೇವರೇ, ಮಾನವರು ತಮ್ಮ ತಮ್ಮ ಸಂಸ್ಕಾರಗಳಿಗೆ ತಕ್ಕಂತೆ, ನೇರವಾಗಿಯೋ ಅಥವಾ ವಕ್ರವಾಗಿಯೋ ಇರುವ ಪಥಗಳನ್ನು ಅನುಸರಿಸುತ್ತಾರೆ. ಅವೆಲ್ಲವೂ ಅವರನ್ನು ನಿನ್ನೆಡೆಗೇ ಕರೆದೊಯ್ಯುತ್ತವೆ" ಎಂದು ಸ್ವಾಮಿ ವಿವೇಕಾನಂದರು ಶಾಂತಿ ಮತ್ತು ಏಕತೆಯ ಸಂದೇಶವನ್ನು ವಿಶ್ವಕ್ಕೆ ಸಾರಿದ್ದರು.