ಹರಿಯಾಣ:ತಮ್ಮ ಮೇಲೆ ನಡೆದಿದೆ ಎನ್ನಲಾದ ಗುಂಡಿನ ದಾಳಿಯ ಬಗ್ಗೆ ರಾಷ್ಟ್ರೀಯ ಮಟ್ಟದ ಕುಸ್ತಿಪಟು ನಿಶಾ ದಹಿಯಾ ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
'ನನ್ನ ಮೇಲೆ ಗುಂಡಿನ ದಾಳಿ ನಡೆದಿದೆ ಅನ್ನೋದು ಸುಳ್ಳು. ನಾನು ನನ್ನ ಕುಟುಂಬದ ಜೊತೆ ಸುರಕ್ಷಿತವಾಗಿದ್ದೇನೆ. ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕಾಗಿ ಗೊಂಡಾದಲ್ಲಿದ್ದೇನೆ' ಎಂದು ರಾಷ್ಟ್ರೀಯ ಕುಸ್ತಿ ಅಕಾಡೆಮಿಯ ಮೂಲಕ ತಿಳಿಸಿದ ವಿಡಿಯೋದಲ್ಲಿ ಸ್ಪಷ್ಟಪಡಿಸಿದರು.
ಗೊಂದಲ ಸೃಷ್ಟಿಸಿದ ಹತ್ಯೆ:
ಹರಿಯಾಣದ ಸೋನಿಪತ್ ಜಿಲ್ಲೆಯ ಉದಯೋನ್ಮುಖ ಕುಸ್ತಿಪಟು ನಿಶಾ ದಹಿಯಾ ಮತ್ತು ಅವರ ಕುಟುಂಬದವರ ಮೇಲೆ ಸಂಜೆ ಗುಂಡಿನ ದಾಳಿ ನಡೆದಿತ್ತು. ಆದರೆ ಈ ನಿಶಾ ದಹಿಯಾ, U-23 ವಿಶ್ವ ಚಾಂಪಿಯನ್ ಶಿಪ್ ಕುಸ್ತಿ ಕ್ರೀಡಾಕೂಟದಲ್ಲಿ ಕಂಚು ಗೆದ್ದ ಸ್ಪರ್ಧಿ ಅಲ್ಲ. ಆದರೆ, ಇಬ್ಬರ ಹೆಸರೂ ಒಂದೇ ಆಗಿದ್ದ ಕಾರಣ ಮೊದಲಿಗೆ ರಾಷ್ಟ್ರೀಯ ಮಟ್ಟದ ಕ್ರೀಡಾಪಟು ನಿಶಾ ದಹಿಯಾ ಅವರ ಮೇಲೆ ದಾಳಿ ಎಂದೇ ಸುದ್ದಿಯಾಗಿತ್ತು.
ಆದರೆ, ನಡೆದಿದ್ದೇನು?
ಅಪರಿಚಿತ ದಾಳಿಕೋರರು ಉದಯೋನ್ಮುಖ ಕುಸ್ತಿಪಟು ನಿಶಾ ಹಾಗು ಆಕೆಯ ಸಹೋದರನ ಮೇಲೆ ಗುಂಡು ಹಾರಿಸಿ ಅವರನ್ನು ಹತ್ಯೆಗೈದಿದ್ದಾರೆ. ಇದೇ ವೇಳೆ ಅವರ ತಾಯಿ ಧನ್‌ಪತಿ ಅವರೂ ಕೂಡಾ ಗಂಭೀರವಾಗಿ ಗಾಯಗೊಂಡಿದ್ದು, ರೋಹ್ಟಕ್‌ನ ಪಿಜಿಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದುಷ್ಕರ್ಮಿಗಳಿಗೆ ತನಿಖೆ ನಡೆಸುತ್ತಿದ್ದಾರೆ. ಇದೇ ವೇಳೆ, ದುಷ್ಕರ್ಮಿಗಳ ಅಟ್ಟಹಾಸದಿಂದ ರೊಚ್ಚಿಗೆದ್ದ ಸ್ಥಳೀಯರು ಸುಶೀಲ್ ಕುಮಾರ್ ತರಬೇತಿ ಅಕಾಡೆಮಿಗೆ ಬೆಂಕಿಹಚ್ಚಿದ್ದಾರೆ.