ನವದೆಹಲಿ :ನೂತನ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಹೇಗೆ ಬೆಂಬಲಿಸಬೇಕು ಎಂಬುದಕ್ಕೆ ಸಂಬಂಧಪಟ್ಟಂತೆ 'ಟೂಲ್‌ಕಿಟ್' ಸಿದ್ಧಪಡಿಸಿದ್ದ ಆರೋಪದ ಮೇಲೆ ಬೆಂಗಳೂರಿನ 21 ವರ್ಷ ವಯಸ್ಸಿನ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರನ್ನು ಬಂಧಿಸಲಾಗಿದೆ. ಇದಕ್ಕೆ ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಭಾರಿ ವಿರೋಧ ವ್ಯಕ್ತಪಡಿಸಿದ್ದು, ದಿಶಾ ಬೆಂಬಲಕ್ಕೆ ನಿಲ್ಲುವುದಾಗಿ ತಿಳಿಸಿದೆ.
ದಿಶಾ ರವಿ ಅವರನ್ನು ಅಕ್ರಮವಾಗಿ ಬಂಧಿಸಿದ್ದನ್ನು ಖಂಡಿಸುತ್ತೇವೆ. ದೆಹಲಿ ಪೊಲೀಸರು ಕ್ರಿಮಿನಲ್ ಸಂವಿಧಾನದ ಎಲ್ಲಾ ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ಉಲ್ಲಂಘಿಸಿದ್ದಾರೆ.
ರಾಜ್ಯಗಳ ನಡುವೆ ಸ್ಥಾಳಾಂತರಿಸುವ ಸಮಯದಲ್ಲಿ ಸಾರಿಗೆ ರಿಮಾಂಡ್ನ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿತ್ತು. ಅಲ್ಲದೆ, ಆಕೆಗೆ ಕಾನೂನು ಸಲಹೆಗಾರನನ್ನು ಪಡೆಯಲು ಅವಕಾಶ ನೀಡಿಲ್ಲ. ಇಲ್ಲಿ ಆರ್ಟಿಕಲ್ 22ರ ಷರತ್ತು(1) ಉಲ್ಲಂಘನೆಯಾಗಿದೆ.
ಒಟ್ಟಾರೆ, ಕಾನೂನಿನಿಂದ ಸ್ಥಾಪಿಸಲ್ಪಟ್ಟ ಕಾರ್ಯವಿಧಾನದ ಬಗ್ಗೆ ಸಂಪೂರ್ಣ ಅಪಹಾಸ್ಯ ಮಾಡಿದೆ. ದೆಹಲಿ ಪೊಲೀಸರ ಇಂತಹ ಕಾನೂನುಬಾಹಿರ ಕ್ರಮಗಳು ಕಾನೂನಿನ ನೆಪದಲ್ಲಿ ಅಪಹರಣಕ್ಕೆ ಕಾರಣವಾಗುತ್ತವೆ. ಆದ್ದರಿಂದ ದಿಶಾ ಅವರನ್ನು ಅಕ್ರಮ ಬಂಧನದಿಂದ ತಕ್ಷಣ ಬಿಡುಗಡೆ ಮಾಡಬೇಕು. ಅಲ್ಲದೆ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಮಹಿಳಾ ಕಾಂಗ್ರೆಸ್ ಒತ್ತಾಯಿಸಿದೆ.