ನವದೆಹಲಿ:ರಾಷ್ಟ್ರಪತಿ ಭವನದಲ್ಲಿ ಇಂದು (ಮಂಗಳವಾರ) ನಡೆದ ರಾಜತಾಂತ್ರಿಕ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾರತದ ಅತ್ಯುತ್ತಮ ಪ್ರದರ್ಶನ ನೀಡಿದ ಕ್ರೀಡಾಪಟುಗಳಿಗೆ ಪ್ರತಿಷ್ಠಿತ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಷಟ್ಲರ್‌ಗಳಾದ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಅವರಿಗೆ 2023ರಲ್ಲಿ ಬ್ಯಾಡ್ಮಿಂಟ್‌ನ್ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಗಾಗಿ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮೊಹಮ್ಮದ್ ಶಮಿ ಮತ್ತು ಪ್ಯಾರಾ ಆರ್ಚರಿಯಲ್ಲಿ ಉದಯಿಸಿದ ತಾರೆ ಶೀತಲ್ ದೇವಿ ಸೇರಿದಂತೆ 26 ಸಾಧಕರಿಗೆ ಅರ್ಜುನ ಪ್ರಶಸ್ತಿ ನೀಡಲಾಯಿತು. ಹಾಗೆಯೇ ಮಹಾವೀರ್ ಪ್ರಸಾದ್ ಸೈನಿ ಮತ್ತು ಇ.ಭಾಸ್ಕರನ್ ಅವರಿಗೆ ದ್ರೋಣಾಚಾರ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಭಾರತೀಯ ಶಟ್ಲರ್‌ಗಳಾದ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಅವರು ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕವನ್ನು ಪಡೆದಿದ್ದರು. ಕಳೆದ ವರ್ಷ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ (ಬಿಡಬ್ಲ್ಯುಎಫ್) ಶ್ರೇಯಾಂಕದಲ್ಲಿ ಇವರೆಲ್ಲ ಉತ್ತುಂಗಕ್ಕೇರಿದ್ದರು. ಪ್ಯಾರಿಸ್‌ನಲ್ಲಿ ಒಲಿಂಪಿಕ್ಸ್ ಇವರ ಮುಂದಿನ ಗುರಿಯಾಗಿದೆ.
ಕೇಂದ್ರ ಕ್ರೀಡಾ ಸಚಿವಾಲಯವು ರಾಷ್ಟ್ರೀಯ ಪ್ರಶಸ್ತಿಗಳನ್ನು ಘೋಷಿಸಿದ ನಂತರ ಈಟಿವಿ ಭಾರತ್ನೊಂದಿಗೆ ಮಾತನಾಡಿದ ಚಿರಾಗ್, ''ಇದು ಭಾರತೀಯ ಬ್ಯಾಡ್ಮಿಂಟನ್ ಜೋಡಿ ಗೆದ್ದ ಮೊದಲ ಪ್ರಶಸ್ತಿಯಾಗಿದೆ. ಇದು ಇತರ ಯುವಕರನ್ನು ರಾಕೆಟ್ ಆಯ್ಕೆ ಮಾಡಿಕೊಳ್ಳುವಂತೆ ಹಾಗೂ ಕ್ರೀಡೆಯನ್ನು ವೃತ್ತಿಯಾಗಿ ಅಳವಡಿಸಿಕೊಳ್ಳಲು ಪ್ರೇರೇಪಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಅಲ್ಲದೇ, ಈ ಸಾಧನೆಯು ಇತರ ಆಟಗಾರರನ್ನು ಬ್ಯಾಡ್ಮಿಂಟನ್ ಜಗತ್ತಿನಲ್ಲಿ ತಮ್ಮ ಛಾಪು ಮೂಡಿಸಲು ಪ್ರೇರೇಪಿಸುತ್ತದೆ'' ಎಂದು ನಂಬಿದ್ದೇನೆ ಎಂದರು.
"ಖೇಲ್ ರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದು ತುಂಬಾ ಸಂತೋಷವಾಗಿದೆ. ಇದು ಒಂದು ಉತ್ತಮ ಭಾವನೆ ಮತ್ತು ಮುಂಬರುವ ವರ್ಷಗಳಲ್ಲಿ ಉತ್ತಮ ಪ್ರದರ್ಶನ ನೀಡಲು ನಮ್ಮನ್ನು ಪ್ರೇರೇಪಿಸುತ್ತದೆ. ನಾವು ಒಲಿಂಪಿಕ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲು ಬಯಸುತ್ತೇವೆ. ಆದರೆ, ಗೆಲುವಿನ ಒತ್ತಡದಲ್ಲಿ ನಾವೇ ಹೊರೆಯಾಗಲು ಬಯಸುವುದಿಲ್ಲ. ನಾವು ನಮ್ಮ ಅನುಭವದಿಂದ ಕಲಿಯುತ್ತೇವೆ ಮತ್ತು ಅದರ ಮೇಲೆ ಸುಧಾರಿಸುತ್ತೇವೆ" ಎಂದು ಸಾತ್ವಿಕ್ ಈಟಿವಿ ಭಾರತ್ಗೆ ಹೇಳಿದ್ದಾರೆ.
ಭಾರತದ ವೇಗಿ ಮೊಹಮ್ಮದ್ ಶಮಿ ಅವರು ಐಸಿಸಿ ಪುರುಷರ ODI ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ತಮ್ಮ ಅಸಾಮಾನ್ಯ ಪ್ರದರ್ಶನಕ್ಕಾಗಿ ಗೌರವಿಸಲ್ಪಟ್ಟರು. ಕೇವಲ ಏಳು ಪಂದ್ಯಗಳಲ್ಲಿ 24 ವಿಕೆಟ್‌ಗಳೊಂದಿಗೆ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಅವರು ಎಲೈಟ್ ಪಂದ್ಯಾವಳಿಯಲ್ಲಿ ಅನುಭವಿ ವೇಗಿ ಜಹೀರ್ ಖಾನ್ ಅವರ 44 ವಿಕೆಟ್‌ಗಳನ್ನು ಮೀರಿಸಿ ಭಾರತದ ಒಟ್ಟಾರೆ ಅತಿ ಹೆಚ್ಚು ವಿಕೆಟ್ ಟೇಕರ್ ಆದರು.
ಗ್ರ್ಯಾಂಡ್ ಮಾಸ್ಟರ್ ಆರ್ ವೈಶಾಲಿ, ಚೆಸ್ ಪ್ರತಿಭೆ ಆರ್ ಪ್ರಗ್ನಾನಂದ ಅವರ ಹಿರಿಯ ಸಹೋದರಿಯಾಗಿದ್ದಾರೆ. ಕೊನೇರು ಹಂಪಿ ಮತ್ತು ದ್ರೋಣವಲ್ಲಿ ಹರಿಕಾ ನಂತರ ಭಾರತದ ಮಹಿಳಾ ಗ್ರಾಂಡ್ ಮಾಸ್ಟರ್ ಆಗಿರುವ ದೇಶದ ಮೂರನೇ ಮಹಿಳೆ ಎಂಬ ಗೌರವಕ್ಕೆ ಇವರು ಪಾತ್ರರಾಗಿದ್ದರು.