ನವದೆಹಲಿ: ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯ ನೀಡುವ 2022ನೇ ಸಾಲಿನ ಅತ್ಯುತ್ತಮ 'ರಾಷ್ಟ್ರೀಯ ಸ್ಮಾರ್ಟ್ ಸಿಟಿ ಪ್ರಶಸ್ತಿ'ಯಲ್ಲಿ ಇಂದೋರ್ ಮೊದಲ ಸ್ಥಾನ ಪಡೆದುಕೊಂಡಿದೆ. ಅನುಕ್ರಮವಾಗಿ ಸೂರತ್ ಹಾಗೂ ಆಗ್ರಾ ನಗರಗಳಿಗೆ ಎರಡನೇ ಮತ್ತು ಮೂರನೇ ಸ್ಥಾನ ಸಿಕ್ಕಿದೆ. ಹಾಗೆಯೇ ರಾಜ್ಯದಿಂದ ಮೂರು ನಗರಗಳು ಪ್ರಶಸ್ತಿಗೆ ಭಾಜನವಾಗಿವೆ. ನಗರ ಪರಿಸರ ವಿಭಾಗದಲ್ಲಿ ಶಿವಮೊಗ್ಗ, ನವೀನ ಕಲ್ಪನೆ ವಿಭಾಗದಲ್ಲಿ ಹುಬ್ಬಳ್ಳಿ-ಧಾರವಾಡ ಹಾಗೂ ವಲಯ ಸ್ಮಾರ್ಟ್ ಸಿಟಿ ವಿಭಾಗದಲ್ಲಿ ಬೆಳಗಾವಿ ಆಯ್ಕೆಯಾಗಿದೆ.
ವಿವಿಧ ವಿಭಾಗಗಳ ಪ್ರಶಸ್ತಿಯನ್ನು ಸಚಿವಾಲಯ ಶುಕ್ರವಾರ ಬಿಡುಗಡೆಗೊಳಿಸಿತು. ಪ್ರಶಸ್ತಿಯನ್ನು ಸೆಪ್ಟೆಂಬರ್ 27ರಂದು ಇಂದೋರ್ನಲ್ಲಿ ನಡೆಯುವ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ನೀಡಲಿದ್ದಾರೆ.
ಇದರೊಂದಿಗೆ ಇತರೆ ವಿಭಿನ್ನ ವಿಭಾಗದಲ್ಲಿ ಇತರೆ ನಗರಗಳು 66 ಪ್ರಶಸ್ತಿಗಳನ್ನು ಪಡೆದಿವೆ. ಉತ್ತಮ ರಾಜ್ಯ ಪ್ರಶಸ್ತಿಯಲ್ಲಿ ಮಧ್ಯಪ್ರದೇಶಕ್ಕೆ ಮೊದಲ ಸ್ಥಾನ ಸಿಕ್ಕಿದೆ. ಎರಡನೇ ಸ್ಥಾನ ತಮಿಳುನಾಡಿಗೆ ಬಂದಿದೆ. ಇದೇ ರೀತಿ ಮೂರನೇ ಸ್ಥಾನವನ್ನು ರಾಜಸ್ಥಾನ ಹಾಗೂ ಉತ್ತರಪ್ರದೇಶ ಜಂಟಿಯಾಗಿ ಪಡೆದಿವೆ.
ಕೇಂದ್ರಾಡಳಿತ ವಿಭಾಗದಲ್ಲಿ ಚಂಡೀಗಢ ಮೊದಲ ಸ್ಥಾನವನ್ನು ಪಡೆದಿದೆ. ಇ-ಆಡಳಿತ ಸೇವೆಯನ್ನು ಗುರುತಿಸಿ ಉತ್ತಮ ಸರ್ಕಾರದ ವಿಭಾಗದಲ್ಲಿ ಮತ್ತೊಂದು ಪ್ರಶಸ್ತಿ ಕೊಡಲಾಗಿದೆ. ನರೇಂದ್ರ ಮೋದಿ ಅವರ ಸ್ಮಾರ್ಟ್ ಸಿಟಿ ಮಿಷನ್ ಯೋಜನೆಯಡಿಯಲ್ಲಿ ಸುಮಾರು 100 ಸಿಟಿಗಳು ಅಭಿವೃದ್ದಿಯಾಗಿವೆ. ಇದರಲ್ಲಿ ರಾಜ್ಯದ ಮೂರು ನಗರಗಳು ಪ್ರಶಸ್ತಿಗೆ ಆಯ್ಕೆಯಾಗಿವೆ.
ಇಂದೋರ್ ದೇಶದ ಸ್ವಚ್ಛ ನಗರಿ: ಸತತ ಆರನೇ ಬಾರಿಯೂ ಇಂದೋರ್ ಭಾರತದ ಅತ್ಯಂತ ಸ್ವಚ್ಛ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 'ಉತ್ತಮ ಮಾದರಿ ರಸ್ತೆ' ನಿರ್ಮಾಣಕ್ಕಾಗಿ 'ಉತ್ತಮ ವಾತಾವರಣ ನಿರ್ಮಾಣ' ವಿಭಾಗದಲ್ಲಿ ಕೊಯಮತ್ತೂರ್ ಉತ್ತಮ ಸಿಟಿ ಪ್ರಶಸ್ತಿಯನ್ನು ಪಡೆದುಕೊಂಡಿದೆ.