ಭಾರತೀಯ ಭೌತವಿಜ್ಞಾನಿ ಸರ್ ಚಂದ್ರಶೇಖರ ವೆಂಕಟ ರಾಮನ್ ಅವರ ರಾಮನ್ ಪರಿಣಾಮದ ಆವಿಷ್ಕಾರವನ್ನು ಸ್ಮರಿಸುವ ಸಲುವಾಗಿ ಪ್ರತಿ ವರ್ಷ ಫೆಬ್ರವರಿ 28 ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನು ಭಾರತದಾದ್ಯಂತ ಆಚರಿಸಲಾಗುತ್ತದೆ. 1928ರ ಫೆಬ್ರವರಿ 28ರಂದು ಭಾರತದಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಅವರು ಮಾಡಿದ ಅದ್ಭುತ ಆವಿಷ್ಕಾರಕ್ಕೆ, 1930 ರಲ್ಲಿ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈಗ, ಭಾರತ ಸರ್ಕಾರ ಪ್ರತಿವರ್ಷ ವಿಜ್ಞಾನ ಕ್ಷೇತ್ರದಲ್ಲಿ ಸಾಧನೆಗೈದ ವಿಜ್ಞಾನಿಗಳನ್ನು ಸನ್ಮಾನಿಸುತ್ತದೆ.
ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸುವ ಉದ್ದೇಶಗಳು: ಜನರ ದೈನಂದಿನ ಜೀವನದಲ್ಲಿ ವೈಜ್ಞಾನಿಕ ಅನ್ವಯಿಕೆಗಳ ಮಹತ್ವದ ಬಗ್ಗೆ ಸಂದೇಶವನ್ನು ಹರಡಲು ರಾಷ್ಟ್ರೀಯ ವಿಜ್ಞಾನ ದಿನವನ್ನು ಪ್ರತಿವರ್ಷ ಆಚರಿಸಲಾಗುತ್ತಿದೆ. ಮಾನವ ಕಲ್ಯಾಣಕ್ಕಾಗಿ ವಿಜ್ಞಾನ ಕ್ಷೇತ್ರದಲ್ಲಿ ಎಲ್ಲಾ ಚಟುವಟಿಕೆಗಳು, ಪ್ರಯತ್ನಗಳು ಮತ್ತು ಸಾಧನೆಗಳನ್ನು ಪ್ರದರ್ಶಿಸುವುದು ಇದರ ಉದ್ದೇಶ. ಈ ದಿನದ ಮೂಲ ಉದ್ದೇಶವೆಂದರೆ ವಿದ್ಯಾರ್ಥಿಗಳಿಗೆ ಹೊಸ ಪ್ರಯೋಗಗಳನ್ನು ಮಾಡುವಂತೆ ಪ್ರೇರೇಪಿಸುವುದು. ಅವರನ್ನು ವಿಜ್ಞಾನದತ್ತ ಆಕರ್ಷಿಸುವುದು ಮತ್ತು ವೈಜ್ಞಾನಿಕ ಸಾಧನೆಗಳ ಬಗ್ಗೆ ಅರಿವು ಮೂಡಿಸುವುದು. ವೈಜ್ಞಾನಿಕ ಚಟುವಟಿಕೆಗಳಿಗೆ ಸಂಬಂಧಿಸಿದ ಹಲವಾರು ಕಾರ್ಯಕ್ರಮಗಳನ್ನು ಈ ದಿನ ಆಯೋಜಿಸಲಾಗುತ್ತದೆ. ಎಲ್ಲಾ ಸಮಸ್ಯೆಗಳನ್ನು ಚರ್ಚಿಸಲು ಮತ್ತು ವಿಜ್ಞಾನದ ಅಭಿವೃದ್ಧಿಗೆ ಹೊಸ ತಂತ್ರಜ್ಞಾನಗಳನ್ನು ಜಾರಿಗೆ ತರಲು ದೇಶದ ವೈಜ್ಞಾನಿಕ ಮನಸ್ಸಿನ ನಾಗರಿಕರಿಗೆ ಅವಕಾಶ ನೀಡುವುದು. ಜನರನ್ನು ಪ್ರೋತ್ಸಾಹಿಸುವುದರ ಜೊತೆಗೆ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಜನಪ್ರಿಯಗೊಳಿಸುವುದು ಈ ದಿನದ ಆಶಯವಾಗಿದೆ.
ರಾಷ್ಟ್ರೀಯ ವಿಜ್ಞಾನ ದಿನ 2021 ರ ಥೀಮ್: ಈ ವರ್ಷ, ರಾಷ್ಟ್ರೀಯ ವಿಜ್ಞಾನ ದಿನಾಚರಣೆ (ಎನ್‌ಎಸ್‌ಡಿ) 2021 ರ ವಿಷಯವೆಂದರೆ "ಎಸ್‌ಟಿಐ ಭವಿಷ್ಯ (ವಿಜ್ಞಾನ ತಂತ್ರಜ್ಞಾನ ಮತ್ತು ನಾವೀನ್ಯತೆ): ಶಿಕ್ಷಣ, ಕೌಶಲ್ಯ ಮತ್ತು ಕೆಲಸದ ಮೇಲೆ ಪರಿಣಾಮಗಳು".
ಫೆಬ್ರವರಿ 28 ರಂದು ಏಕೆ? : ಡಾ. ಸಿ.ವಿ. ರಾಮನ್ ಅವರು ಫೆಬ್ರವರಿ 28, 1928 ರಂದು ಅಧಿಕೃತವಾಗಿ ‘ರಾಮನ್ ಪರಿಣಾಮವನ್ನು’ ಕಂಡುಹಿಡಿದಿದ್ದಾರೆ ಎಂದು ಘೋಷಿಸಿದರು. ಈ ಮಹತ್ವದ ಆವಿಷ್ಕಾರಕ್ಕಾಗಿ ಅವರಿಗೆ 1930 ರಲ್ಲಿ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ನೀಡಲಾಯಿತು. ಈ ಆವಿಷ್ಕಾರವನ್ನು ಗುರುತಿಸಲು ಪ್ರತಿ ವರ್ಷ ಫೆಬ್ರವರಿ 28 ರಂದು ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಬೇಕೆಂದು ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ (ಎನ್‌ಸಿಎಸ್‌ಟಿಸಿ) ಕೇಂದ್ರ ಸರ್ಕಾರವನ್ನು ಪ್ರಸ್ತಾಪಿಸಿತು. ಅದರ ನಂತರ, ಭಾರತ ಸರ್ಕಾರವು ಆ ಪ್ರಸ್ತಾಪವನ್ನು ಅಂಗಿಕರಿಸಿತು ಮತ್ತು ಮೊದಲ ರಾಷ್ಟ್ರೀಯ ವಿಜ್ಞಾನ ದಿನವನ್ನು ಫೆಬ್ರವರಿ 28, 1987 ರಂದು ಆಚರಿಸಲಾಯಿತು.