ಇಂದು ಸ್ವತಂತ್ರ ಮತ್ತು ಜವಾಬ್ದಾರಿಯುತ ಪತ್ರಿಕಾ ಉಪಸ್ಥಿತಿಯನ್ನು ಸೂಚಿಸುವ ರಾಷ್ಟ್ರೀಯ ಪತ್ರಿಕಾ ದಿನ. ಪ್ರತಿ ವರ್ಷ ನವೆಂಬರ್ 16ರಂದು ಸ್ವತಂತ್ರ ಪತ್ರಿಕಾ ಅಸ್ತಿತ್ವವನ್ನು ಸಾರುವ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾಗೆ (ಪಿಐಬಿ) ಗೌರವ ಸಮರ್ಪಿಸುವ ಉದ್ದೇಶದಿಂದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ನಡೆಯುತ್ತದೆ. ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾವು ಪ್ರತಿಯೊಬ್ಬ ಪತ್ರಕರ್ತನ ಹೊಣೆಗಾರಿಕೆ, ಪತ್ರಿಕೆಯ ರಕ್ಷಣೆ ಮತ್ತು ಪತ್ರಿಕಾ ಸ್ವಾತಂತ್ರ್ಯದ ಬದ್ಧತೆಯನ್ನು ಪುನರುಚ್ಚರಿಸುತ್ತದೆ. ಈ ಸಲದ ಪತ್ರಿಕಾ ದಿನಾಚರಣೆಗೆ ಪಿಐಬಿ ನವದೆಹಲಿಯ ವಿಜ್ಞಾನ ಭವನದಲ್ಲಿ "ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಮಾಧ್ಯಮ" ಎಂಬ ವಿಷಯದ ಮೇಲೆ ರಾಷ್ಟ್ರೀಯ ಪತ್ರಿಕಾ ದಿನ ಆಯೋಜಿಸಿದೆ.
ಪಿಐಬಿ ಹುಟ್ಟು: 1956ರಲ್ಲಿ ಮೊದಲ ಪತ್ರಿಕಾ ಆಯೋಗವು ಪತ್ರಿಕೋದ್ಯಮದಲ್ಲಿ ವೃತ್ತಿಪರ ನೈತಿಕತೆಯನ್ನು ಪ್ರೋತ್ಸಾಹಿಸಲು ಹಾಗೂ ನಿರ್ವಹಿಸಲು ಶಾಸನಬದ್ಧ ಅಧಿಕಾರ ಹೊಂದಿರುವ ಸಂಸ್ಥೆ ರಚಿಸಲು ನಿರ್ಧರಿಸಿತು. ಈ ಉದ್ದೇಶದಿಂದಲೇ 1966ರಲ್ಲಿ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಸ್ಥಾಪನೆಯಾಯಿತು. 1966 ನವೆಂಬರ್ 16ರಿಂದ ಸಂಸ್ಥೆ ತನ್ನ ಕಾರ್ಯ ನಿರ್ವಹಿಸಲು ಪ್ರಾರಂಭಿಸಿತು. ಪ್ರೆಸ್ ಕೌನ್ಸಿಲ್ ಆರಂಭವಾದಾಗದಿಂದಲೂ ಸಂಸ್ಥೆಯು ತನ್ನ ಉದ್ದೇಶವನ್ನು ಶ್ರದ್ಧೆಯಿಂದ ಪಾಲಿಸಿಕೊಂಡು ಬಂದಿದೆ.
ಸಂಸ್ಥೆಯ ರಚನೆ: ಇದರ ಅಧ್ಯಕ್ಷರು ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಾಧೀಶರಾಗಿರುತ್ತಾರೆ. ಇವರನ್ನು ಹೊರತುಪಡಿಸಿ 28 ಇತರ ಸದಸ್ಯರಿದ್ದಾರೆ. ಈ ಪೈಕಿ 20 ಮಂದಿ ಪತ್ರಿಕಾ ಮಾಧ್ಯಮದವರು, 5 ಸದಸ್ಯರನ್ನು ಸಂಸತ್ತಿನ ಉಭಯ ಸದನಗಳಿಂದ ನಾಮನಿರ್ದೇಶನ ಮಾಡಲಾಗುತ್ತದೆ. ಉಳಿದ ಮೂವರು ಸದಸ್ಯರು ಸಾಂಸ್ಕೃತಿಕ, ಸಾಹಿತ್ಯ ಮತ್ತು ಕಾನೂನು ಕ್ಷೇತ್ರಗಳ ಪ್ರತಿನಿಧಿಗಳಾಗಿರುತ್ತಾರೆ.