ಮಿರ್ಜಾಪುರ/ಉತ್ತರ ಪ್ರದೇಶ : ರಾಷ್ಟ್ರೀಯ ನೆಟ್‌ಬಾಲ್ ತಂಡದಲ್ಲಿ ಆಡಿ ಮೂರು ಬೆಳ್ಳಿ, ಎರಡು ಕಂಚು ಮತ್ತು ಎರಡು ಚಿನ್ನದ ಪದಕಗಳನ್ನು ಗೆದ್ದಿರುವ ಆಟಗಾರ ಪ್ರಸ್ತುತ ಕೊರೊನಾದಿಂದಾಗಿ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದಾರೆ.
ಮಿರ್ಜಾಪುರ ಜಿಲ್ಲೆಯ ಪಹಾರಿ ಬ್ಲಾಕ್‌ನಲ್ಲಿರುವ ಚಂದೇಲ್ವಾ ಗ್ರಾಮದ ನಿವಾಸಿ ವಿವೇಕ್ ಕುಮಾರ್ ಮಿಶ್ರಾ (25), ನೆಟ್‌ಬಾಲ್ ರಾಷ್ಟ್ರೀಯ ಆಟಗಾರ. ಆದ್ರೆ, ಸದ್ಯ ಎಮ್ಮೆ ಕಾಯುವ ಕೆಲಸ ಮಾಡುತ್ತಿದ್ದಾರೆ.
ಇದಕ್ಕೆ ಕಾರಣ ಕೊರೊನಾ ಮಹಾಮಾರಿ. ಕೊರೊನಾ ಬಿಕ್ಕಟ್ಟು ಹಿನ್ನೆಲೆ ತಾವು ಮಾಡುತ್ತಿದ್ದ ಅರೆಕಾಲಿಕ ಗೌರವ ತರಬೇತುದಾರ ಹುದ್ದೆ ಕಳೆದುಕೊಂಡ ಕಾರಣ, ವಿವೇಕ್ ಕುಟುಂಬವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಎಮ್ಮೆ ಹಾಲು ಮಾರಿ ಜೀವನ ನಡೆಸುವಂತಾಗಿದೆ.
ಎಮ್ಮೆ ಜೊತೆ ರಾಷ್ಟ್ರೀಯ ಆಟಗಾರನ ಬದುಕು :ಮಿರ್ಜಾಪುರ ಜಾಸೋವರ್ ಕ್ರೀಡಾಂಗಣದಲ್ಲಿ ಆಟಗಾರರಿಗೆ ತರಬೇತಿ ನೀಡಲು ವಿವೇಕ್ 2019ರಿಂದ ಅರೆಕಾಲಿಕ ಗೌರವ ತರಬೇತುದಾರರಾಗಿ ಕೆಲಸಕ್ಕೆ ಸೇರಿದರು.
ಆದರೆ, ಲಾಕ್ಡೌನ್ನಿಂದ ಒಪ್ಪಂದದಂತೆ ಕೆಲಸವನ್ನು ಮುಂದುವರಿಸಲಾಗಿಲ್ಲ. ಹೀಗಾಗಿ, ನಿರುದ್ಯೋಗಿಯಾಗಬೇಕಾಯ್ತು. ಬೇರೆ ದಾರಿ ಇಲ್ಲದೇ ಸದ್ಯ ಎಮ್ಮೆ ಹಾಲು ಮಾರಿ ಕುಟುಂಬದ ಆರ್ಥಿಕ ಪರಿಸ್ಥಿತಿ ನಿಭಾಯಿಸುತ್ತಿದ್ದಾರೆ.
ದಿವ್ಯಾಂಗ ಸೋದರಿಯ ಕಾಲೇಜು ಶುಲ್ಕವನ್ನು ಕಟ್ಟಲಾಗಲಿಲ್ಲ:ಈ ಯುವ ಆಟಗಾರನಿಗೆ ಅನಾರೋಗ್ಯ ಪೀಡಿತೆ ಅಜ್ಜಿ, ಹೆಂಡತಿ, ಸಣ್ಣ ಮಗು ಮತ್ತು ಅಂಗವಿಕಲ ಸಹೋದರಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಇದೆ. ಸೋದರಿಯನ್ನು ಬಿ.ಇಡಿ ಓದಿಸಲು ವಿವೇಕ್, ಎಜುಕೇಷನ್ ಲೋನ್ ಸಹ ತೆಗೆದುಕೊಂಡಿದ್ದಾರೆ. ಆದರೆ, ಆಕೆಯನ್ನು ಓದಿಸಲು ಆ ಹಣ ಸಾಕಾಗುತ್ತಿಲ್ಲ, ತಂಗಿಯ ಕಾಲೇಜು ಶುಲ್ಕವನ್ನು ಭರಿಸಲಾಗದೇ ಸಂಕಷ್ಟಕ್ಕೀಡಾಗಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ಗೆ ಸಹಾಯ ಕೋರಿ ಪತ್ರ :ನಿರುದ್ಯೋಗಿಯಾಗಿರುವ ವಿವೇಕ್ ಇತ್ತೀಚೆಗೆ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ತಮ್ಮ ಆರ್ಥಿಕ ಸಂಕಷ್ಟದ ಬಗ್ಗೆ ವಿವರಿಸಿದ್ದಾರೆ. ನಾನು ಉತ್ತರ ಪ್ರದೇಶಕ್ಕಾಗಿ ನೆಟ್‌ಬಾಲ್ ಆಡುತ್ತೇನೆ. ಆದರೆ, ನಾನು ಇಂದು ಇಂತಹ ಪರಿಸ್ಥಿತಿ ಎದುರಿಸುತ್ತೇನೆಂದು ಎಂದಿಗೂ ಭಾವಿಸಿರಲಿಲ್ಲ.
ಈ ವರ್ಷ ತನ್ನ ಸಹೋದರಿಯ ಶುಲ್ಕವನ್ನು ಸಹ ಕಟ್ಟಲು ಸಾಧ್ಯವಾಗಿಲ್ಲ. ಹೀಗಾಗಿ, ದಯವಿಟ್ಟು ನನಗೆ ಆರ್ಥಿಕ ಸಹಾಯ ಮಾಡಿ. ಇದರಿಂದ ನಾನು ರಾಜ್ಯಕ್ಕಾಗಿ ಇನ್ನಷ್ಟು ಆಡಬಹುದು. ಮಕ್ಕಳಿಗೆ ತರಬೇತಿ ನೀಡಿ ಸ್ಪರ್ಧೆಗಳಿಗೆ ಅವರನ್ನು ರೆಡಿ ಮಾಡುತ್ತೇನೆ ಎಂದು ವಿನಂತಿಸಿಕೊಂಡಿದ್ದಾರೆ.