ನವದೆಹಲಿ:ರಾಷ್ಟ್ರೀಯ ಭದ್ರತಾ ದಳ (ಎನ್ಐಎ) ಅಧಿಕಾರಿಗಳು ಲಾರೆನ್ಸ್ ಬಾಂಬಿಹಾ ಮತ್ತು ಅರ್ಶ್ ಡಲ್ಲಾ ಗ್ಯಾಂಗ್‌ಗಳ ಸಹಚರರಿಗೆ ಸಂಬಂಧದಪಟ್ಟ ಪ್ರದೇಶಗಳಲ್ಲಿ ಇಂದು (ಬುಧವಾರ) ದಾಳಿ ನಡೆಸಿ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ. ಪಂಜಾಬ್, ಹರಿಯಾಣ, ರಾಜಸ್ಥಾನ, ದೆಹಲಿ, ಉತ್ತರಾಖಂಡ ಮತ್ತು ಉತ್ತರ ಪ್ರದೇಶದ ಸುಮಾರು 51 ಸ್ಥಳಗಳಲ್ಲಿ ದಾಳಿ ನಡೆಯುತ್ತಿದೆ. ಭಯೋತ್ಪಾದಕರು, ದರೋಡೆಕೋರರು ಮತ್ತು ಡ್ರಗ್ ಡೀಲರ್‌ಗಳ ನಡುವಿನ ಸಂಬಂಧವನ್ನು ಕೊನೆಗೊಳಿಸಲು ತನಿಖಾ ದಳ ಕಠಿಣ ಕ್ರಮ ಕೈಗೊಳ್ಳುತ್ತಿದೆ.
ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಕೆನಡಾ ಮತ್ತು ಭಾರತದ ನಡುವೆ ಉದ್ವಿಗ್ನತೆಯ ಮಧ್ಯೆಯೇ ಎನ್ಐಎ ವಿವಿಧೆಡೆ ರೈಡ್ ಮಾಡಿದೆ. ಎನ್‌ಐಎ ತಂಡ ಪಂಜಾಬ್‌ನಲ್ಲಿ ಗರಿಷ್ಠ 31 ಸ್ಥಳಗಳಲ್ಲಿ ಹುಡುಕಾಟ ನಡೆಸುತ್ತಿದೆ. ಅದೇ ಸಮಯದಲ್ಲಿ, ರಾಜಸ್ಥಾನದ 13 ಸ್ಥಳಗಳಲ್ಲಿ, ಹರಿಯಾಣದಲ್ಲಿ 4, ಉತ್ತರಾಖಂಡದಲ್ಲಿ 2, ದೆಹಲಿ-ಎನ್‌ಸಿಆರ್ ಮತ್ತು ಯುಪಿಯಲ್ಲಿ ತಲಾ 1 ಸ್ಥಳಗಳಲ್ಲಿ ದಾಳಿ ನಡೆಸಿದೆ. ವಿದೇಶದಲ್ಲಿ ನೆಲೆಸಿರುವ ಖಲಿಸ್ತಾನಿಗಳು ಮತ್ತು ಇತರರು ಹವಾಲಾ ದಂಧೆಯ ಮೂಲಕ ಭಾರತದಲ್ಲಿರುವವರಿಗೆ ಡ್ರಗ್ಸ್ ಮತ್ತು ಶಸ್ತ್ರಾಸ್ತ್ರಗಳನ್ನು ವಿತರಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
43 ವ್ಯಕ್ತಿಗಳ ವಿವರ ಬಿಡುಗಡೆ: ಡೆಹ್ರಾಡೂನ್ ಪೊಲೀಸರಿಂದ ಪಡೆದ ಮಾಹಿತಿಯ ಪ್ರಕಾರ, ಎನ್‌ಐಎ ತಂಡ ಇಂದು ಬೆಳಿಗ್ಗೆಯಿಂದ ದಾಳಿ ನಡೆಸಿದೆ. ರಾಜ್ಯ ಪೊಲೀಸರಿಂದ ಬಂದಿರುವ ಮಾಹಿತಿಯಂತೆ, ಎನ್‌ಐಎ ತಂಡವು ಶಸ್ತ್ರಾಸ್ತ್ರಗಳನ್ನು ಪರಿಶೀಲಿಸುತ್ತಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಕೆನಡಾದೊಂದಿಗೆ ಸಂಪರ್ಕ ಹೊಂದಿರುವ ಭಯೋತ್ಪಾದಕ ದರೋಡೆಕೋರ ಜಾಲಕ್ಕೆ ಸಂಬಂಧಿಸಿದ 43 ವ್ಯಕ್ತಿಗಳ ವಿವರಗಳನ್ನು ಸಹ ಬಿಡುಗಡೆ ಮಾಡಿದೆ.
ಕೇಂದ್ರ ಸರ್ಕಾರವು ಸ್ವಾಧೀನಪಡಿಸಿಕೊಳ್ಳಬಹುದಾದ ಅವರ ಆಸ್ತಿ ಮತ್ತು ಆಸ್ತಿಗಳ ವಿವರಗಳನ್ನು ಹಂಚಿಕೊಳ್ಳಲು ಎನ್ಐಎ ಸಾರ್ವಜನಿಕರನ್ನು ಕೇಳಿದೆ. ಆರೋಪಿಗಳ ಹೆಸರಿನಲ್ಲಿ ಅಥವಾ ಅವರ ಸಹಚರರು, ಸ್ನೇಹಿತರು ಮತ್ತು ಸಂಬಂಧಿಕರ ಹೆಸರಿನಲ್ಲಿರುವ ಆಸ್ತಿಗಳು, ವ್ಯವಹಾರಗಳ ಬಗ್ಗೆ ವಿವರಗಳನ್ನು ಹಂಚಿಕೊಳ್ಳಲು ಎನ್ಐಎ ವಿನಂತಿಸಿದೆ. ಇದೇ ವೇಳೆ ವ್ಯಾಪಾರ ಪಾಲುದಾರರು, ಕೆಲಸಗಾರರು, ಉದ್ಯೋಗಿಗಳು ಮತ್ತು ಏಜೆಂಟ್‌ಗಳ ವಿವರಗಳನ್ನು ಹಂಚಿಕೊಳ್ಳಲು ತಿಳಿಸಿದೆ.