ನವದೆಹಲಿ:ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರ ಸೇರಿದಂತೆ ದೆಹಲಿ, ಉತ್ತರ ಪ್ರದೇಶ ಮತ್ತು ಹರಿಯಾಣ ಸೇರಿದಂತೆ ಹಲವೆಡೆ 26/11 ಮಾದರಿ ಮುಂಬೈ ದಾಳಿಗಿಂತಲೂ ದೊಡ್ಡ ಪ್ರಮಾಣದಲ್ಲಿ ಬಾಂಬ್ ಸ್ಫೋಟ ನಡೆಸುವ ದೊಡ್ಡ ಸಂಚೊಂದನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಪತ್ತೆ ಮಾಡಿದೆ. ಶಹನವಾಜ್ ಸೇರಿದಂತೆ ಬಂಧಿತರಾದ ಮೂವರು ಶಂಕಿತ ಐಸಿಸ್ ಉಗ್ರರ ವಿಚಾರಣೆಯ ವೇಳೆ ಈ ಸ್ಫೋಟಕ ಮಾಹಿತಿ ಕಲೆಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೂವರು ಶಂಕಿತ ಉಗ್ರರು ಎಂಜಿನಿಯರಿಂಗ್ ಅಭ್ಯಾಸ ಮಾಡಿರುವ ಕಾರಣ, ಪಾಕಿಸ್ತಾನದ ಏಜೆಂಟ್ಗಳ ಸೂಚನೆಯಂತೆ ಬಾಂಬ್ ತಯಾರಿಕೆಯಲ್ಲಿ ಪರಿಣತಿ ಸಾಧಿಸಿದ್ದರು. ರಾಮಮಂದಿರ ಸೇರಿದಂತೆ ಹಲವಾರು ಪ್ರಮುಖ ನಗರಗಳಲ್ಲಿ ವಿಧ್ವಂಸಕ ಕೃತ್ಯ ಸೃಷ್ಟಿಸಿ, ದೇಶದ ದೊಡ್ಡ ರಾಜಕಾರಣಿಗಳ ಹತ್ಯೆ ಮಾಡುವ ಸಂಚು ಹೊಂದಲಾಗಿತ್ತು ಎಂಬುದು ವಿಚಾರಣೆಯಲ್ಲಿ ತಿಳಿದುಬಂದಿದೆ.
ಐಸಿಸ್ ದೊಡ್ಡ ಸಂಚು ಬಯಲು:ಪುಣೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಎನ್ಐಎಗೆ ಬೇಕಾಗಿದ್ದ ಶಹನವಾಜ್‌ನನ್ನು ದೆಹಲಿಯ ಜೈತ್‌ಪುರದಲ್ಲಿ ಸೋಮವಾರ ಬಂಧಿಸಲಾಗಿದ್ದರೆ, ಇನ್ನಿಬ್ಬರು ಉಗ್ರರಾದ ರಿಜ್ವಾನ್ ಮತ್ತು ಅಶ್ರಫ್ನನ್ನು ಉತ್ತರ ಪ್ರದೇಶದ ಲಖನೌ ಮತ್ತು ಮೊರಾದಾಬಾದ್‌ನಲ್ಲಿ ಬಂಧಿಸಲಾಗಿತ್ತು. ಮೂವರೂ ಕೂಡಾ ತನಿಖಾ ಸಂಸ್ಥೆಯಿಂದ ತಲೆಮರೆಸಿಕೊಂಡಿದ್ದರು.
ಭವಿಷ್ಯದಲ್ಲಿ ಭಯೋತ್ಪಾದಕ ಸಂಚು ಮತ್ತು ದೇಶ ವಿರೋಧಿ ಚಟುವಟಿಕೆಗಳ ಬಗ್ಗೆ ಕೇಂದ್ರ ಮತ್ತು ರಾಜ್ಯಗಳ ಉನ್ನತ ಮಟ್ಟದ ಗುಪ್ತಚರ ಸಂಸ್ಥೆಗಳು ನವದೆಹಲಿಯಲ್ಲಿ ಸಮಾವೇಶಗೊಳ್ಳುವ ಮೊದಲು ದೇಶದಲ್ಲಿ ಐಸಿಸ್ ಉಗ್ರ ಸಂಘಟನೆ ನಡೆಸಲು ಉದ್ದೇಶಿಸಿದ್ದ ವಿಧ್ವಂಸಕ ಕೃತ್ಯಗಳ ದೊಡ್ಡ ಸಂಚು ಈ ಮೂವರು ಶಂಕಿತರ ಬಂಧನದಿಂದ ಬಯಲಾಗಿದೆ.
ಭಯೋತ್ಪಾದನಾ ವಿರೋಧಿ ಸಮಾವೇಶ:ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ದೆಹಲಿಯಲ್ಲಿ ಅಕ್ಟೋಬರ್ 5,6 ರಂದು ಭಯೋತ್ಪಾದನಾ ವಿರೋಧಿ ಸಮಾವೇಶ ಆಯೋಜಿಸಿದ್ದು, ಗೃಹ ಸಚಿವ ಅಮಿತ್ ಶಾ ಉದ್ಘಾಟಿಸಲಿದ್ದಾರೆ. ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥರು, ಎನ್‌ಐಎ, ರಾ, ಐಬಿ ಮುಖ್ಯಸ್ಥರು ಮತ್ತು ರಾಜ್ಯಗಳ ಡಿಜಿಪಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕೂಡ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಬಂಡುಕೋರರು ಮತ್ತು ಭಯೋತ್ಪಾದಕರ ನಡುವೆ ಹೆಚ್ಚುತ್ತಿರುವ ನಂಟು, ಭಾರತ ವಿರೋಧಿ ಚಟುವಟಿಕೆಗಳಿಗೆ ಪ್ರೇರಕವಾಗಿರುವ ಮಾದಕ ದ್ರವ್ಯ ಸಾಗಣೆಯ ತಡೆ, ಖಲಿಸ್ತಾನ ಉಗ್ರರ ಬೆದರಿಕೆಯನ್ನು ಎದುರಿಸುವ ಕಾರ್ಯತಂತ್ರದ ಬಗ್ಗೆಯೂ ಸಮಾವೇಶದಲ್ಲಿ ಚರ್ಚಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ನಾಂದೇಡ್ ಆಸ್ಪತ್ರೆಯಲ್ಲಿ ರೋಗಿಗಳ ಸಾವು: ವೈದ್ಯಾಧಿಕಾರಿಯಿಂದ ಕೊಳಕಾಗಿದ್ದ ಶೌಚಾಲಯ ತೊಳಿಸಿದ ಸಂಸದ- ವಿಡಿಯೋ