ನವದೆಹಲಿ/ತಿರುವನಂತಪುರಂ:ನಿಫಾ ವೈರಸ್ಗೆ ಇಬ್ಬರು ಸಾವನ್ನಪ್ಪಿದ್ದು, ಅಧ್ಯಯನಕ್ಕಾಗಿ ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆ ತನ್ನ ತಂಡವನ್ನು ಕೇರಳಕ್ಕೆ ಬಂದಿದೆ. ವೈರಸ್‌ನಿಂದ ಸಾವನ್ನಪ್ಪಿದವರ ಸಂಪರ್ಕಕ್ಕೆ ಬಂದವರ ಮಾದರಿಗಳನ್ನು ಪರೀಕ್ಷಿಸಲು ಮೊಬೈಲ್ ಪ್ರಯೋಗಾಲಯವನ್ನು ಕೋಯಿಕೋಡ್ನಲ್ಲಿ ಸ್ಥಾಪಿಸಲಾಗಿದೆ. ಇದೇ ವೇಳೆ ರಾಜ್ಯಕ್ಕೆ ಸೋಂಕಿನ ವಿರುದ್ಧ ಹೋರಾಡಲು ಆ್ಯಂಟಿಬಾಡಿ ಔಷಧ ಬಂದಿದೆ ಎಂದು ಸರ್ಕಾರ ತಿಳಿಸಿದೆ.
ಬಾವಲಿಗಳಿಂದ ಹರಡುತ್ತಿರುವ ಸೋಂಕಿನ ಮೇಲೆ ನಿಗಾ ಇಡಲು ರಾಜ್ಯಕ್ಕೆ ಪಶುಸಂಗೋಪನಾ ಇಲಾಖೆಯ ತಜ್ಞರ ತಂಡವನ್ನು ಸಹ ನಿಯೋಜಿಸಲಾಗಿದೆ. ನಿಫಾ ವೈರಸ್ ಇರುವಿಕೆಯನ್ನು ಪರೀಕ್ಷಿಸಲು ಬಾವಲಿಗಳಿಂದ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ. ಮೆದುಳಿಗೆ ಹಾನಿ ಮಾಡುವ ವೈರಸ್ ಇದುವರೆಗೆ ಕೋಯಿಕೋಡ್ ಜಿಲ್ಲೆಯಲ್ಲಿ ಇಬ್ಬರನ್ನು ಬಲಿ ತೆಗೆದುಕೊಂಡಿದೆ. ಇನ್ನೂ ಮೂವರಲ್ಲಿ ಸೋಂಕು ದೃಢಪಟ್ಟಿದೆ.
ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಕಂಟೈನ್ಮೆಂಟ್ ಝೋನ್ ನಿರ್ಮಿಸಲಾಗಿದೆ. ಸೋಂಕಿನ ಆರಂಭಿಕ ಪರೀಕ್ಷೆ ಮತ್ತು ಪತ್ತೆಗಾಗಿ ಮೊಬೈಲ್ ಪ್ರಯೋಗಾಲಯ ಸ್ಥಾಪಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. ಇಲ್ಲಿಯವರೆಗೆ ಸಂಗ್ರಹಿಸಿದ ಮಾದರಿಗಳನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿದೆ.
ಕೇಂದ್ರ ಆರೋಗ್ಯ ಸಚಿವರಿಂದ ಪರಿಶೀಲನೆ:ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವೆ ಭಾರತಿ ಪ್ರವೀಣ್ ಪವಾರ್ ಅವರು ಪುಣೆಯಲ್ಲಿರುವ ಐಸಿಎಂಆರ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಭೇಟಿ ನೀಡಿ, ಕೋಯಿಕ್ಕೋಡ್‌ನಲ್ಲಿ ವರದಿಯಾದ ನಿಫಾ ವೈರಸ್ ಪ್ರಕರಣಗಳ ಪರಿಶೀಲನಾ ಸಭೆ ನಡೆಸಿದರು. ಕೋಯಿಕ್ಕೋಡ್ ಜಿಲ್ಲೆಯ ವೈರಸ್ ಪೀಡಿತ ಪ್ರದೇಶಗಳನ್ನು ಕ್ವಾರಂಟೈನ್ ವಲಯಗಳಾಗಿ ಘೋಷಿಸಲಾಗಿದೆ ಎಂದು ಅವರು ಹೇಳಿದರು.
ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ, ಆರ್‌ಎಂಎಲ್ ಆಸ್ಪತ್ರೆ ಮತ್ತು ನಿಮ್ಹಾನ್ಸ್‌ನ ತಜ್ಞರನ್ನು ಒಳಗೊಂಡ ಐದು ಸದಸ್ಯರ ಕೇಂದ್ರ ತಂಡವನ್ನು ಕೇರಳದಲ್ಲಿ ಪರಿಸ್ಥಿತಿಯನ್ನು ಅವಲೋಕಿಸಲು ಮತ್ತು ನಿಫಾ ವೈರಸ್ ಸೋಂಕಿನ ನಿರ್ವಹಣೆಗಾಗಿ ರಾಜ್ಯಕ್ಕೆ ಕಳುಹಿಸಲಾಗಿದೆ. ವೈರಸ್ ಎದುರಿಸಲು ಕೇಂದ್ರ ಸರ್ಕಾರದಿಂದ ಸಾಧ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಸಚಿವರು ಹೇಳಿದರು.
ಮೊನೊಕ್ಲೋನಲ್ ಆ್ಯಂಟಿಬಾಡಿ:ನಿಫಾ ವೈರಸ್ ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ಮೊನೊಕ್ಲೋನಲ್ ಆ್ಯಂಟಿಬಾಡಿ ರಾಜ್ಯಕ್ಕೆ ಬಂದಿದೆ ಎಂದು ಕೇರಳ ಸರ್ಕಾರ ಗುರುವಾರ ತಿಳಿಸಿದೆ. ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಈ ಬಗ್ಗೆ ತಿಳಿಸಿದ್ದು, ಮೊನೊಕ್ಲೋನಲ್ ಆ್ಯಂಟಿಬಾಡಿ ತರಿಸಲಾಗಿದೆ. ನಿಫಾ ವೈರಸ್ಗೆ ಇದು ಉತ್ತಮವಾಗಿ ಕೆಲಸ ಮಾಡುತ್ತದೆ. ವೈದ್ಯಕೀಯವಾಗಿ ಇನ್ನೂ ಸಾಬೀತಾಗಿಲ್ಲವಾದರೂ, ಸೋಂಕಿಗೆ ಲಭ್ಯವಿರುವ ಏಕೈಕ ಆಂಟಿವೈರಲ್ ಚಿಕಿತ್ಸೆ ಇದಾಗಿದೆ. ಹೀಗಾಗಿ ಔಷಧದ ಪರಿಣಾಮಕಾರಿತ್ವದ ಬಗ್ಗೆ ಕೇಂದ್ರ ತಜ್ಞರೊಂದಿಗೆ ಚರ್ಚಿಸಲಾಗಿದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ:ಕೇರಳದಲ್ಲಿ ಮತ್ತೆ ನಿಫಾ ಉಲ್ಬಣ; ರಾಜ್ಯದಲ್ಲಿ ನಾಲ್ಕನೇ ಬಾರಿ ಕಾಣಿಸಿಕೊಂಡ ಸೋಂಕು