ಕರ್ನಾಟಕ

karnataka

ETV Bharat / bharat

Happy Friendship Day: ರಕ್ತ ಸಂಬಂಧ ಮೀರಿದ ಪವಿತ್ರ ಬಂಧವೇ ಸ್ನೇಹ - ಭಾರತದಲ್ಲಿ ಸ್ನೇಹ ದಿನ ಆಚರಣೆ

ಚಿಕ್ಕವರಿದ್ದಾಗ ನಮ್ಮ ಮನೆಯ ಅಕ್ಕಪಕ್ಕದವರು, ಶಾಲೆ-ಕಾಲೇಜುಗಳಲ್ಲಿ ಸಹಪಾಠಿಗಳು, ಆಫೀಸ್​ನಲ್ಲಿ ಸಹೋದ್ಯೋಗಿಗಳು.. ಹೀಗೆ ಹುಟ್ಟಿನಿಂದ ಕೊನೆಯುಸಿರಿನವರೆಗೂ ಸ್ನೇಹಿತರ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇಂದಿನ ಆಧುನಿಕ ಯುಗದಲ್ಲಿ ಸಾಮಾಜಿಕ ಜಾಲತಾಣದಲ್ಲಿಯೂ ಸ್ನೇಹ ಸಂಬಂಧ ಶುರುವಾಗಿವೆ. ಗೆಳೆತನದ ಪ್ರತೀಕವಾಗಿ ಈ ದಿನವನ್ನು ‘ರಾಷ್ಟ್ರೀಯ ಸ್ನೇಹ ದಿನ’ ಎಂದು ಆಚರಿಸಲಾಗುತ್ತಿದೆ.

Happy Friendship Day
ಸ್ನೇಹ ದಿನ 2021

By

Published : Aug 1, 2021, 8:44 AM IST

ಮೊದಲ ಕಿರುನಗೆಯಲ್ಲಿ ಶುರುವಾದ ಸ್ನೇಹ ಜೀವದ ಕೊನೆಯ ಉಸಿರವರೆಗೂ ಉಳಿಯುವ ಅದ್ಭುತ ಸಂಬಂಧವಾಗಿ ಬೆಸೆಯುತ್ತದೆ. ಸ್ನೇಹ ಎಂಬ ಪದವೇ ಹಾಗೆ. ರಕ್ತ ಸಂಬಂಧಗಳಿಗೂ ಮೀರಿದ್ದು ಈ ಬಂಧ. ಮಹಾಭಾರತದ ಕರ್ಣ-ದುರ್ಯೋಧನ, ಶ್ರೀಕೃಷ್ಣ-ಸುಧಾಮರ ಗೆಳೆತನ ಎಂದೆಂದಿಗೂ ಅಜರಾಮರ.

ಇಂತಹ ಸುಮಧುರ ಅನುಬಂಧಕ್ಕೆ ಎಂದು ಆಗಸ್ಟ್‌ನ ಮೊದಲ ಭಾನುವಾರವನ್ನು ಮೀಸಲಿಡಲಾಗಿದೆ. ಅದುವೇ ‘ರಾಷ್ಟ್ರೀಯ ಸ್ನೇಹ ದಿನ’. ಸ್ನೇಹವು ಅನೇಕ ರೂಪಗಳಲ್ಲಿ ಬರುತ್ತದೆ. ಪ್ರತಿ ಜೀವಿಯ ಜೀವನದುದ್ದಕ್ಕೂ, ಸ್ನೇಹ ಮತ್ತು ಅವುಗಳ ಅರ್ಥಗಳು ವಿಕಸನಗೊಳ್ಳುತ್ತವೆ. ಚಿಕ್ಕವರಿದ್ದಾಗ ನಮ್ಮ ಮನೆಯ ಅಕ್ಕಪಕ್ಕದವರು, ಶಾಲೆ-ಕಾಲೇಜುಗಳಲ್ಲಿ ಸಹಪಾಠಿಗಳು, ಆಫೀಸ್​ನಲ್ಲಿ ಸಹೋದ್ಯೋಗಿಗಳು ಹೀಗೆ ಹುಟ್ಟಿನಿಂದ ಕೊನೆಯುಸಿರಿನವರೆಗೂ ಸ್ನೇಹಿತರ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇಂದಿನ ಆಧುನಿಕಯುಗದಲ್ಲಿ ಸಾಮಾಜಿಕ ಜಾಲತಾಣದಲ್ಲಿಯೂ ಸ್ನೇಹ ಸಂಬಂಧ ಶುರುವಾಗಿವೆ. ಗೆಳೆತನದ ಪ್ರತೀಕವಾಗಿ ಈ ದಿನವನ್ನು ‘ರಾಷ್ಟ್ರೀಯ ಸ್ನೇಹ ದಿನ’ ಎಂದು ಆಚರಿಸಲಾಗುತ್ತಿದೆ.

ರಾಷ್ಟ್ರೀಯ ಸ್ನೇಹ ದಿನದ ಇತಿಹಾಸ:

ರಾಷ್ಟ್ರೀಯ ಸ್ನೇಹ ದಿನವು ಮೂಲತಃ 1930ರ ದಶಕದಲ್ಲಿ ಹಾಲ್ಮಾರ್ಕ್ ಕಾರ್ಡ್‌ಗಳಿಗೆ ಮಾರ್ಕೆಟಿಂಗ್ ತಂತ್ರವಾಗಿತ್ತು. ಸಂಸ್ಥಾಪಕ ಜಾಯ್ಸ್ ಹಾಲ್ ಈ ದಿನ ಆಗಸ್ಟ್ 2 ರಂದು ನಡೆಯಲಿದೆ ಎಂದು ಗೊತ್ತುಪಡಿಸಿದರು. ಈ ದಿನದಂದು ನಿಮ್ಮ ಸ್ನೇಹಿತರಿಗೆ ಕಾರ್ಡ್​ ಕಳುಹಿಸಿ ಶುಭ ಕೋರಿ ಎಂದರು. 1935 ರ ಯು.ಎಸ್. ಕಾಂಗ್ರೆಸ್ ಆಗಸ್ಟ್ ಮೊದಲ ಭಾನುವಾರವನ್ನು ರಾಷ್ಟ್ರೀಯ ಸ್ನೇಹ ದಿನವೆಂದು ಘೋಷಿಸಿತು.

ಕೋವಿಡ್ ಸಾಂಕ್ರಾಮಿಕದ ಮಧ್ಯೆ ಸ್ನೇಹದಿನ:

ಕೊರೊನಾ ವೈರಸ್ ಸಾಂಕ್ರಾಮಿಕದಿಂದಾಗಿ ಸಾಮಾಜಿಕ ಅಂತರದ ಮಾನದಂಡಗಳನ್ನು ಗಮನದಲ್ಲಿಟ್ಟುಕೊಂಡು ಈ ವರ್ಷ ಸ್ನೇಹ ದಿನವನ್ನು ಆಚರಿಸಲಾಗುತ್ತಿದೆ. ಅನೇಕರು ಸಾಮಾಜಿಕ ಅಂತರ ಕಾಪಾಡಿಕೊಂಡು ಶುಭ ಹಾರೈಸುವುದರ ಜೊತೆಗೆ ಫ್ರೆಂಡ್​ಶಿಪ್​ ಬ್ಯಾಂಡ್​ ಕಟ್ಟುವುದನ್ನೂ ಸಹ ಕಡಿಮೆ ಮಾಡಿದ್ದಾರೆ. ಇನ್ನೂ ಕೆಲವರು ದೂರದೂರುಗಳಲ್ಲಿ ವಾಸಿಸುತ್ತಿದ್ದು, ತಮ್ಮ ಸ್ನೇಹಿತರಿಗೆ ಸಂದೇಶಗಳ ಮುಖೇನ ವಿಶ್​ ಮಾಡುತ್ತಿದ್ದಾರೆ.

ಸ್ನೇಹ ದಿನವನ್ನು ಹೇಗೆ ಆಚರಿಸುವುದು..

  • ಕಾರ್ಡ್‌ಗಳು, ಹೂಗಳು ಮತ್ತು ಉಡುಗೊರೆಗಳ ವಿನಿಮಯ
  • ಫ್ರೆಂಡ್​ಶಿಪ್​ ಬ್ಯಾಂಡ್‌ಗಳನ್ನು ಕಟ್ಟಿಕೊಳ್ಳುವುದು
  • ನಿಮ್ಮ ಸ್ನೇಹಿತರಿಗೆ ಸಹಾಯಹಸ್ತ ನೀಡಿ
  • ನಿಮ್ಮ ಮತ್ತು ಸ್ನೇಹಿತನ ಫೋಟೋ ಕೊಲಾಜ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಿ
  • ಅವರ ಅತ್ಯಂತ ನೆಚ್ಚಿನ ಉಡುಗೊರೆಯನ್ನು ನೀಡಿ
  • ಸಾಧ್ಯವಾದಷ್ಟು ಒಟ್ಟಿಗೆ ಸಮಯ ಕಳೆಯಿರಿ

ನಮ್ಮ ಜೀವನದ ಅನೇಕ ಕಾಲಘಟ್ಟಗಳಲ್ಲಿ ಹಲವಾರು ಬಾರಿ ಹೆಗಲು ಕೊಟ್ಟು ನಿಲ್ಲುವವರು ಸ್ನೇಹಿತರು. ಹುಟ್ಟು-ಸಾವಿನ ನಡುವಿನ ಈ ಬಾಳ ಪಯಣದಲ್ಲಿ ಬರುವ ಸಂದಿಗ್ಧ ಪರಿಸ್ಥಿತಿಗಳಲ್ಲಿ ದೀಪ ಹಿಡಿದು ದಾರಿ ಸಾಗಿಸುವವನೇ ನಿಜವಾದ ಸ್ನೇಹಿತ. ಖುಷಿ, ದುಃಖ, ಕೋಪ, ಸಂತಾಪಗಳಲ್ಲಿ ಸ್ನೇಹದ ಬೇರುಂಟು. ಸ್ನೇಹ ಚಿಗುರುತ್ತಾ ಹೋದಷ್ಟು ಭಾವನೆಗಳ ನೀರೆರೆದು ಪೋಷಿಸುತ್ತಾ ಹೆಮ್ಮರವಾಗಿ ಬೆಳೆಸಬೇಕು. ಸ್ನೇಹ ಚಿರಂಜೀವಿ. ಬದುಕಿನ ಪ್ರತಿ ಹಂತದಲ್ಲೂ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುವ ಪ್ರತಿಯೊಬ್ಬ ಗೆಳೆಯನಿಗೆ ಈ ದಿನ ಅರ್ಪಣೆ.

ನಿಮ್ಮೆಲ್ಲರಿಗೂ ಸ್ನೇಹ ದಿನದ ಶುಭಾಶಯಗಳು.

ABOUT THE AUTHOR

...view details