ಬೆಂಗಳೂರು: ದೇಶದ ಅಭಿವೃದ್ಧಿಯಲ್ಲಿ ಇಂಜಿನಿಯರ್ಗಳ ಪಾತ್ರ ಪ್ರಮುಖವಾಗಿದೆ. ಇಂಜಿನಿಯರಿಂಗ್ ಕ್ಷೇತ್ರಕ್ಕೆ ದೇಶಕ್ಕೆ ಅಪಾರ ಕೊಡುಗೆಯನ್ನು ನೀಡಿದವರಲ್ಲಿ ಪ್ರಮುಖರು ಕರ್ನಾಟಕದ ಮೋಕ್ಷಗುಂಡಂ ವಿಶ್ವೇಶ್ವರಯ್ಯ. ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಅವರು ನೀಡಿದ ಕೊಡುಗೆ ಸ್ಮರಣಾರ್ಥವಾಗಿ ಪ್ರತಿ ವರ್ಷ ಅವರ ಜನ್ಮ ದಿನವನ್ನು ಅಂದರೆ ಸೆಪ್ಟೆಂಬರ್ 15ರಂದು ರಾಷ್ಟ್ರೀಯ ಇಂಜಿನಿಯರ್ಸ್ ದಿನ ಎಂದು ಗುರುತಿಸಲಾಗಿ, ಆಚರಣೆ ಮಾಡಲಾಗುತ್ತಿದೆ.
ರಾಷ್ಟ್ರೀಯ ಇಂಜಿನಿಯರ್ಸ್ ದಿನವನ್ನು ಮೊದಲ ಬಾರಿಗೆ 1968ರಲ್ಲಿ ಆಚರಿಸಲಾಯಿತು. ಈ ದಿನವನ್ನು ತಾಂತ್ರಿಕ ಶಿಕ್ಷಣದಲ್ಲಿ ಅತ್ಯಂತ ಪ್ರಮುಖ ದಿನವಾಗಿ ಆಚರಿಸಲಾಗುವುದು. ವಿಶ್ವೇಶ್ವರಯ್ಯನವರ ಕೊಡುಗೆಯನ್ನು ಸ್ಮರಿಸಿ ಕೇವಲ ಭಾರತದಲ್ಲಿ ಮಾತ್ರವಲ್ಲದೆ, ಶ್ರೀಲಂಕಾ ಮತ್ತು ತಾಂಜಾನಿಯದಲ್ಲಿ ಸೆಪ್ಟೆಂಬರ್ 15 ಅನ್ನು ಇಂಜಿನಿಯರ್ ದಿನವಾಗಿ ಆಚರಿಸಲಾಗುವುದು
ನಾಡು ಕಂಡ ಮೇಧಾವಿ :ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರು ಕರ್ನಾಟಕದ ಮುದ್ದೇನಹಳ್ಳಿ ಗ್ರಾಮದಲ್ಲಿ 1861ರ ಸೆಪ್ಟೆಂಬರ್ 15ರಂದು ಜನಿಸಿದರು. ವಿಶ್ವೇಶ್ವರಯ್ಯ ಅವರು 15ನೇ ವಯಸ್ಸಿಗೆ ತಮ್ಮ ತಂದೆಯನ್ನು ಕಳೆದುಕೊಂಡರು. ಚಿಕ್ಕಬಳ್ಳಾಪುರದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಇವರು, ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಪಡೆದರು.
ಪುಣೆಯ ಸೈನ್ಸ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿಯನ್ನು ಮೊದಲ ರ್ಯಾಂಕ್ನೊಂದಿಗೆ ಪಡೆದರು. ಬಳಿಕ ಅವರು ಬಾಂಬೆ ಸರ್ಕಾರದಿಂದ ನಾಸಿಕ್ನಲ್ಲಿ ಸಹಾಯಕ ಇಂಜಿನಿಯರ್ ಆಗಿ ಉದ್ಯೋಗ ಪಡೆದರು. ಈ ವೇಳೆ ಅವರು ವಿವಿಧ ಯೋಜನೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು.
ಬಳಿಕ 1912 ರಿಂದ 1918ರವರೆಗೆ ಮೈಸೂರಿನ ದಿವಾನರಾಗಿ ಸೇವೆ ಸಲ್ಲಿಸಿದರು. ಮೈಸೂರಿನ ಕೃಷ್ಣ ರಾಜ ಸಾಗರ ಅಣೆಕಟ್ಟು ಮತ್ತು ಹೈದ್ರಾಬಾದ್ನ ಪ್ರವಾಹ ಸಂರಕ್ಷಣಾ ವ್ಯವಸ್ಥೆಯ ಹಿಂದಿನ ರೂವಾರಿ ಇವರಾಗಿದ್ದಾರೆ. ಮೈಸೂರಿನ ನಾಲ್ಕನೇ ಕೃಷ್ಣರಾಜ ಒಡೆಯರ್ ಅವರು ಆರ್ಥಿಕ ಬಿಕ್ಕಟ್ಟಿನ ಬರಗಾಲದ ನಡುವೆಯೂ ಅಣೆಕಟ್ಟನ್ನು ನಿರ್ಮಿಸಿದರು. ಈ ಹಿನ್ನೆಲೆ ಗೌರವಾರ್ಥವಾಗಿ ಈ ಅಣೆಕಟ್ಟಿಗೆ ಅವರ ಹೆಸರನ್ನು ಇಡಲಾಗಿದೆ. 1903ರಲ್ಲಿ ಪುಣೆಯ ಖಡಕ್ವಾಸ್ಲಾ ಜಲಾಶಯವನ್ನು ಕೂಡ ವಿನ್ಯಾಸ ಮಾಡಿದರು.
ಸಂದ ಪ್ರಶಸ್ತಿಗಳು :ಸರ್ಎಂ ವಿಶ್ವೇಶ್ವರಯ್ಯ ಅವರು ಇಂಜಿನಿಯರಿಂಗ್ ಕ್ಷೇತ್ರದಲ್ಲಿ ನೀಡಿದ ಅಪಾರ ಕೊಡುಗೆಗಾಗಿ ಭಾರತ ಸರ್ಕಾರ 1955ರಲ್ಲಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಐದನೇ ಕಿಂಗ್ ಜಾರ್ಜ್ ಅವರಿಂದ ಬ್ರಿಟಿಷ್ ನೈಟ್ ಹುಡ್ ಅನ್ನು ನೀಡಲಾಗಿದೆ. ಬ್ರಿಟಿಷ್ ನೈಟ್ ಹುಡ್ ಗೌರವದಿಂದಾಗಿ ಅವರಿಗೆ ಸರ್ ಎಂಬ ಬಿರುದು ಬಂದಿದೆ. ಅಪಾರ ಸೇವೆ ಕಾರ್ಯಗಳ ಹೊರತಾಗಿ ಅವರು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಮತ್ತು ಟಾಟಾ ಕಬ್ಬಿಣ ಮತ್ತು ಉಕ್ಕು ಆಡಳಿತ ಮಂಡಳಿ ಸದಸ್ಯರಾಗಿದ್ದರು. ತಮ್ಮ ವೃತ್ತಿ ಜೀವನದಲ್ಲಿ ಅನೇಕ ಪುಸ್ತಕಗಳನ್ನು ಕೂಡ ಅವರು ಬರೆದಿದ್ದಾರೆ. 1962ರಲ್ಲಿ ಅವರು ನಿಧನರಾದರು.
ಪ್ರಧಾನಿ ಶುಭಾಶಯ:ಇಂಜಿನಿಯರ್ಸ್ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಎಲ್ಲಾ ಪ್ರತಿಭಾನ್ವಿತ ಇಂಜಿನಿಯರ್ಗಳಿಗೆ ಶುಭಕೋರಿ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ವಿಶ್ವೇಶ್ವರಯ್ಯ ಅವರ ಕೊಡುಗೆ ಸ್ಮರಣೆ ಜೊತೆಗೆ ದೇಶ ನಿರ್ಮಾಣದಲ್ಲಿ ಇಂಜಿನಿಯರ್ಗಳ ಪಾತ್ರ ಬಿಂಬಿಸುವ ತುಣುಕನ್ನು ಹಂಚಿಕೊಂಡಿದ್ದಾರೆ. ''ಇಂಜಿನಿಯರ್ಗಳ ಅವಿಷ್ಕಾರದ ಮಿದುಳು ಮತ್ತು ಸಮರ್ಪಣೆ ದೇಶದ ಪ್ರಗತಿಯ ಬೆನ್ನೆಲುಬು. ಮೂಲಸೌಕರ್ಯದಿಂದ ಟೆಕ್ ಪ್ರಗತಿಯವರೆಗೆ ಅವರ ಕೊಡುಗೆಗಳು ನಮ್ಮ ಜೀವನದ ಪ್ರತಿಯೊಂದು ಅಂಶವನ್ನು ಸ್ಪರ್ಶಿಸುತ್ತವೆ'' ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಇದನ್ನೂ ಓದಿ:ಆದಿತ್ಯ L1 ನೌಕೆಯ ಕಕ್ಷೆ ಬದಲಾವಣೆ ನಾಲ್ಕನೇ ಪ್ರಕ್ರಿಯೆ ಯಶಸ್ವಿ: ಇಸ್ರೋ