ಕರ್ನಾಟಕ

karnataka

ETV Bharat / bharat

ಇಂದು ರಾಷ್ಟ್ರೀಯ ವೈದ್ಯರ ದಿನ.. ಏನಿದರ ವಿಶೇಷತೆ, ಯಾರ ಸ್ಮರಣಾರ್ಥವಾಗಿ ಈ ದಿನ? - ಡಾ. ಬಿ.ಸಿ ರಾಯ್ ಸ್ಮರಣೆ

ಕೋವಿಡ್ ಮಹಾಮಾರಿ ಜಗತ್ತನ್ನು ಸಂಕಷ್ಟಕ್ಕೆ ದೂಡಿದ್ದ ಸಮಯದಲ್ಲಿ ಜನರ ಜೀವ ಕಾಪಾಡಿದ್ದು ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ. ಅಂತಹ ವೈದ್ಯರ ಸೇವೆ ಗೌರವಿಸುವ ದಿನವೇ ಈ ಜುಲೈ 1. ಈ ದಿನದಂದು ಭಾರತದಲ್ಲಿ ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ.

National Doctors Day
ರಾಷ್ಟ್ರೀಯ ವೈದ್ಯರ ದಿನ

By

Published : Jul 1, 2021, 7:09 AM IST

ಕೋಲ್ಕತ್ತಾ :ಶ್ರೇಷ್ಠ ವೈದ್ಯ ಮತ್ತು ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿ ಡಾ. ಬಿಧನ್ ಚಂದ್ರ ರಾಯ್ ಅವರ ಜನ್ಮ ದಿನವಾದ ಜುಲೈ 1 ರಂದು ಭಾರತದಲ್ಲಿ ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ವೈದ್ಯರು ಸಮಾಜಕ್ಕೆ ನೀಡುತ್ತಿರುವ ಸೇವೆ ಗೌರವಿಸುವ ಸಲುವಾಗಿ ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ವಿವಿಧ ದೇಶಗಳಲ್ಲಿ ವಿವಿಧ ದಿನಗಳಲ್ಲಿ ವೈದ್ಯರ ದಿನಾಚರಣೆ ನಡೆಯುತ್ತದೆ.

ಡಾ. ಬಿಧನ್ ಚಂದ್ರ ರಾಯ್ ಅವರ ಜನ್ಮ ಮತ್ತು ಮರಣ ದಿನ ಜುಲೈ 1. ಆದ್ದರಿಂದ ಈ ದಿನವನ್ನು ಅವರ ಗೌರವಾರ್ಥ ವೈದ್ಯರ ದಿನವಾಗಿ ಆಚರಿಸಲಾಗುತ್ತದೆ. ರಾಷ್ಟ್ರೀಯ ವೈದ್ಯರ ದಿನಾಚರಣೆಯಂದು, ವೈದ್ಯರ ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸಲಾಗುತ್ತದೆ. ಅಲ್ಲದೇ, ನಮ್ಮ ಜೀವನಕ್ಕೆ ವೈದ್ಯರ ಕೊಡುಗೆ ಪ್ರಶಂಸಿಲಾಗುತ್ತದೆ. ಈ ವಿಶೇಷ ದಿನವನ್ನು ಜನರ ಸೇವೆಗಾಗಿ ಪ್ರಾಣವನ್ನೇ ಪಣಕ್ಕಿಟ್ಟಿರುವ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಸಮರ್ಪಿಸಲಾಗುತ್ತದೆ.

ಕೋವಿಡ್ ಆವರಿಸಿಕೊಂಡ ಮೇಲಂತೂ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರ ಕೊಡುಗೆ ಎಲ್ಲರಿಗೂ ಅರ್ಥವಾಗಿದೆ. ಹಾಗಾಗಿ, ಈ ದಿನದ ವಿಶೇಷತೆಗಳನ್ನು ತಿಳಿದುಕೊಳ್ಳೋಣ.

ವೈದ್ಯರ ದಿನ -2021 ರ ಘೋಷವಾಕ್ಯ:ಈ ವರ್ಷ ಅಂದರೆ, 2021 ರ ರಾಷ್ಟ್ರೀಯ ವೈದ್ಯರ ದಿನವನ್ನು ಕೋವಿಡ್ ಹೋರಾಟದ ನಡುವೆ ಆಚರಿಸಲಾಗ್ತಿದೆ. ಹಾಗಾಗಿ, " ಕುಟುಂಬ ವೈದ್ಯರೊಂದಿಗೆ ಭವಿಷ್ಯ ನಿರ್ಮಾಣ" ಎಂಬ ಘೋಷವಾಕ್ಯವನ್ನು ಈ ವರ್ಷದ ವೈದ್ಯರ ದಿನಕ್ಕೆ ಇಡಲಾಗಿದೆ.

ಡಾ. ಬಿಧನ್ ಚಂದ್ರ ರಾಯ್ :

ಡಾ. ಬಿಧನ್ ಚಂದ್ರ ರಾಯ್ ಜುಲೈ 1, 1882 ರಂದು ಜನಿಸಿದರು ಮತ್ತು 1962 ರಲ್ಲಿ ಅದೇ ದಿನಾಂಕದಂದು ನಿಧನರಾದರು. ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಾಗಿ ಅವರಿಗೆ ಫೆಬ್ರವರಿ 4, 1961 ರಂದು ಭಾರತ ರತ್ನ ಪ್ರಶಸ್ತಿಯನ್ನು ನೀಡಲಾಯಿತು.

ಸ್ವಾತಂತ್ರ್ಯ ನಂತರ ರಾಜ್ಯದಲ್ಲಿ ಸಾಕಷ್ಟು ಕೈಗಾರಿಕಾ ಅಭಿವೃದ್ಧಿ ನಡೆದ ಕಾರಣ, ಬಿಧನ್ ರಾಯ್ ಅವರನ್ನು ಈಗಲೂ ಪಶ್ಚಿಮ ಬಂಗಾಳದ ಶ್ರೇಷ್ಠ ಮುಖ್ಯಮಂತ್ರಿ ಮತ್ತು ರಾಜ್ಯವನ್ನು ಅಭಿವೃದ್ದಿಯತ್ತ ಕೊಂಡೊಯ್ದ ನಾಯಕ ಎಂದು ಪರಿಗಣಿಸಲಾಗುತ್ತದೆ.

ಡಾ. ಬಿ.ಸಿ ರಾಯ್ ಕೊಡುಗೆಗಗಳು :

ಡಾ. ಬಿಧನ್ ಚಂದ್ರ ರಾಯ್ ಸಾಮಾನ್ಯ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸಿದರು. ಅವರು ಕೋಲ್ಕತ್ತಾದಲ್ಲಿ ಆರ್. ಜಿ. ಕೇರ್ ವೈದ್ಯಕೀಯ ಕಾಲೇಜು, ಜಾದವ್​ಪುರದಲ್ಲಿ ಟಿ.ಬಿ. ಆಸ್ಪತ್ರೆ, ಚಿತ್ತರಂಜನ್ ಸೇವಾ ಸದನ್, ಕಮಲಾ ನೆಹರು ಆಸ್ಪತ್ರೆ, ವಿಕ್ಟೋರಿಯಾ ಸಂಸ್ಥೆ, ಚಿತ್ತರಂಜನ್ ಕ್ಯಾನ್ಸರ್ ಆಸ್ಪತ್ರೆಗಳನ್ನು ನಿರ್ಮಾಣ ಮಾಡಿ ವೈದ್ಯಕೀಯ ಸೇವೆ ನೀಡುವಲ್ಲಿ ಯಶಸ್ವಿಯಾಗಿದ್ದರು .

ಭಾರತೀಯ ಮಾನಸಿಕ ಆರೋಗ್ಯ ಸಂಸ್ಥೆ, ಸಾಂಕ್ರಾಮಿಕ ರೋಗಗಳ ಆಸ್ಪತ್ರೆ ಮತ್ತು ಕೋಲ್ಕತ್ತಾದಲ್ಲಿ ಮೊದಲ ಸ್ನಾತಕೋತ್ತರ ವೈದ್ಯಕೀಯ ಕಾಲೇಜು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಶನ್‌ನ ಮೇಯರ್ ಆಗಿ ಉಚಿತ ಶಿಕ್ಷಣ, ಉಚಿತ ವೈದ್ಯಕೀಯ ನೆರವು, ಉತ್ತಮ ರಸ್ತೆಗಳ ನಿರ್ಮಾಣ ಮತ್ತು ನೀರು ಸರಬರಾಜು ವ್ಯವಸ್ಥೆಯನ್ನು ಉತ್ತೇಜಿಸಿದರು.

ನಂತರ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಅವರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಪುನಃ ಸ್ಥಾಪಿಸಿದರು. ದುರ್ಗಾಪುರ, ಕಲ್ಯಾಣಿ, ಬಿಧನ್​ನಗರ, ಅಶೋಕ್‌ನಗರ ಮತ್ತು ಹಬ್ರಾ ಎಂಬ ಐದು ಪ್ರಮುಖ ನಗರಗಳಿಗೆ ಅಡಿಪಾಯ ಹಾಕಿದರು.

1961 ರಲ್ಲಿ ಬಂಗಾಳದ ಜನರಿಗೆ ಮನೆಗಳನ್ನು ಉಡುಗೊರೆಯಾಗಿ ನೀಡಿದರು. ಬಿಧನ್ ರಾಯ್ ಅವರ ಸೇವೆಯನ್ನು ಪರಿಗಣಿಸಿ ಫೆಬ್ರವರಿ 4, 1961 ರಂದು ಭಾರತ ಸರ್ಕಾರವು ಭಾರತದ ಅತ್ಯುನ್ನತ ನಾಗರಿಕ ಗೌರವ ಭಾರತ ರತ್ನವನ್ನು ನೀಡಿ ಗೌರವಿಸಿತು.

ಔಷಧ, ರಾಜಕೀಯ, ವಿಜ್ಞಾನ, ತತ್ವಶಾಸ್ತ್ರ, ಸಾಹಿತ್ಯ ಮತ್ತು ಕಲೆ ಕ್ಷೇತ್ರಗಳಲ್ಲಿ ಕೆಲಸ ಮಾಡಿರುವವರನ್ನು ಗುರುತಿಸುವ ಬಿ.ಸಿ ರಾಯ್ ರಾಷ್ಟ್ರೀಯ ಪ್ರಶಸ್ತಿಯನ್ನು 1976 ರಲ್ಲಿ ಪ್ರಾರಂಭಿಸಲಾಯಿತು.

ದಿನದ ಇತಿಹಾಸ :

ಭಾರತೀಯ ವೈದ್ಯಕೀಯ ಸಂಘವು ಆಯೋಜಿಸುವ ರಾಷ್ಟ್ರೀಯ ವೈದ್ಯರ ದಿನಾಚರಣೆಯು, ವೈದ್ಯರು ಮತ್ತು ಆರೋಗ್ಯ ವೃತ್ತಿಪರರ ಶ್ರಮಕ್ಕೆ ಸಮರ್ಪಿತವಾಗಿದೆ. ಮಾನವೀಯತೆಯ ಸೇವೆಗೆ ಅವರು ನೀಡಿದ ಕೊಡುಗೆಯನ್ನು ಗುರುತಿಸಲು ಐಎಂಎ ಮೊದಲ ಬಾರಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಡಾ. ಬಿ.ಸಿ.ರಾಯ್ ಅವರ ಗೌರವಾರ್ಥ 1991 ರಲ್ಲಿ ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಿತು.

ABOUT THE AUTHOR

...view details