ನಾಂದೇಡ್ (ಮಹಾರಾಷ್ಟ್ರ) :ಜಿಲ್ಲೆಯ ಅರ್ಧಪುರ ತಾಲೂಕಿನ ಪರಡಿ ಗ್ರಾಮದಲ್ಲಿ 2017ರಲ್ಲಿ ನದಿಯಲ್ಲಿ ಮುಳುಗುತ್ತಿದ್ದ ಇಬ್ಬರು ಹುಡುಗಿಯ ಜೀವ ಉಳಿಸಿದ್ದಕ್ಕಾಗಿ 2018ರಲ್ಲಿ ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಪಡೆದಿರುವ ಇಜಾಜ್ ಅಬ್ದುಲ್ ರೌಫ್ ನದಾಫ್, ಇದೀಗ ಜೀವನೋಪಾಯಕ್ಕಾಗಿ ದಿನಕ್ಕೆ ಕೂಲಿ ಕೆಲಸ ಮಾಡುತ್ತಿದ್ದಾರೆ. ದಿನಕ್ಕೆ 300 ರೂಪಾಯಿ ಗಳಿಸುವ ಅವರು, ಸಂಕಷ್ಟದ ಜೀವನ ಸಾಗಿಸುತ್ತಿದ್ದಾರೆ.
'ಬಾಲ ಶೌರ್ಯ ಪ್ರಶಸ್ತಿ' ಪಡೆದಿದ್ದ ಇಜಾಜ್ :ನಾಂದೇಡ್ ಜಿಲ್ಲೆಯವರಾದ ಇಜಾಜ್, ತನ್ನ ಸಾಹಸದ ಮೂಲಕ ದೇಶಾದ್ಯಂತ ಪ್ರಸಿದ್ದಾಗಿದ್ದರು. ಇವರ ಕೆಲಸವನ್ನು ಮೆಚ್ಚಿ 9ನೇ ತರಗತಿಯಲ್ಲಿ ಇರುವಾಗಲೇ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು 'ಬಾಲ ಶೌರ್ಯ' ಪ್ರಶಸ್ತಿ ನೀಡಿ ಗೌರವಿಸಿದ್ದರು. ಅಲ್ಲದೇ ಪ್ರಧಾನಿ ಮೋದಿ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಂದ ಮೆಚ್ಚುಗೆ ಪಡೆದಿದ್ದರು.
ಬಾಯಿ ಮಾತಿಗೆ ಸೀಮಿತವಾದ ಭರವಸೆಗಳು:ಆ ಸಮಯದಲ್ಲಿ ಜನಪ್ರತಿನಿಧಿಗಳು ಭರವಸೆಗಳ ಸುರಿಮಳೆಯನ್ನೇ ಸುರಿಸಿದ್ದರು. ಇಜಾಜ್ ಅವರ ಮುಂದಿನ ಶಿಕ್ಷಣದ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ವಹಿಸಿಕೊಂಡಿತ್ತು. ಆದರೆ, ಅವೆಲ್ಲವೂ ಕೇವಲ ಭರವಸೆಗಳಾಗಿ ಉಳಿಯಿತೇ ಹೊರತು, ಇದುವರೆಗೆ ಇಜಾಜ್ ಅವರಿಗೆ ಸರಿಯಾದ ಸಹಕಾರಗಳು ಸಿಕ್ಕಿಲ್ಲ.
ಕೂಲಿ ಕೆಲಸದ ಮೊರೆ ಹೋದ ರಾಷ್ಟ್ರ ಪ್ರಶಸ್ತಿ ವಿಜೇತ:ಮನೆಯಲ್ಲಿ ಆರ್ಥಿಕ ಸಂಕಷ್ಟ ಇರುವುದರಿಂದ ಇಜಾಜ್ ಈಗ ಕೂಲಿ ಕೆಲಸದ ಮೊರೆ ಹೋಗಿದ್ದಾರೆ. ತಂದೆ, ತಾಯಿ, ಸಹೋದರ ಮತ್ತು ಸಹೋದರಿಯೊಂದಿಗೆ ಪುಟ್ಟ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಸರ್ಕಾರ ಶಿಕ್ಷಣದ ವೆಚ್ಚ ಭರಿಸುವ ಭರವಸೆ ನೀಡಿದ್ದರಿಂದ ಇಜಾಜ್ ಅವರ ತಂದೆ, ಅವರನ್ನು ನಾಂದೇಡ್ನ ಉನ್ನತ ಶಿಕ್ಷಣ ಸಂಸ್ಥೆಯೊಂದಕ್ಕೆ 11ನೇ ತರಗತಿಯ ವಿಜ್ಞಾನ ವಿಭಾಗಕ್ಕೆ ಸೇರಿಸಿದ್ದರು.
ಆರಂಭದಲ್ಲಿ ಕೇಂದ್ರ ಸರ್ಕಾರ 20 ರಿಂದ 30 ಸಾವಿರ ರೂ. ಕಾಲೇಜಿಗೆ ಪಾವತಿಸಿತ್ತು. ಆದರೆ, 12ನೇ ತರಗತಿಗೆ ಸೇರಿಸುವಾಗ ಸರ್ಕಾರದ ಕಡೆಯಿಂದ ಯಾವುದೇ ಸಹಕಾರ ಸಿಗಲಿಲ್ಲ. ಆದ್ದರಿಂದ ಕಾಲೇಜು ಶುಲ್ಕ ಕಟ್ಟಲಾಗದೇ ಇಜಾಜ್ ತನ್ನ ದಾಖಲಾತಿ ವಾಪಸ್ ಪಡೆದಿದ್ದರು.