ಲೋಹರ್ದಗಾ (ಜಾರ್ಖಂಡ್): ಪ್ರತಿಭೆ ಯಾರಪ್ಪನ ಸೊತ್ತಲ್ಲ ಎಂಬ ಮಾತಿದೆ. ಆದರೆ, ಪ್ರತಿಭೆ ಹೊಂದಿದ್ದರೂ ಪರಿಸ್ಥಿತಿಯು ಸಂಕಷ್ಟಕ್ಕೆ ದೂಡುವಂತೆ ಮಾಡುತ್ತದೆ. ಇಂತಹದ್ದೇ ಕಠಿಣ ಪರಿಸ್ಥಿತಿಯನ್ನು ಜಾರ್ಖಂಡ್ನ ರಾಷ್ಟ್ರೀಯ ಬಿಲ್ಲುಗಾರ್ತಿ ದೀಪ್ತಿ ಕುಮಾರಿ ಎದುರಿಸುತ್ತಿದ್ದಾರೆ. ದೀಪ್ತಿ ಪ್ರತಿಭಾವಂತೆ ಆಗಿದ್ದರೂ ಆರ್ಥಿಕ ಬಿಕ್ಕಟ್ಟು ಆಕೆಯ ಇಡೀ ಕುಟುಂಬವನ್ನು ಆವರಿಸಿದೆ. ಇದೇ ಕಾರಣದಿಂದಾಗಿ ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದ ಆರ್ಚರಿ ಪಟು ಈಗ ರಾಂಚಿಯಲ್ಲಿ ಚಹಾ ಮಾರಾಟ ಮಾಡುತ್ತಿದ್ದಾರೆ.
ಲೋಹರ್ಡಗಾ ಜಿಲ್ಲೆಯ ರಾಜಾ ಬಂಗ್ಲಾ ಗ್ರಾಮದ ನಿವಾಸಿ ಬಜರಂಗ ಪ್ರಜಾಪತಿ ಅವರ ಪುತ್ರಿಯಾಗಿರುವ ದೀಪ್ತಿ ಕುಮಾರಿ ಅವರದ್ದು ಬಡ ಕುಟುಂಬ. ತಂದೆ ರೈತರಾಗಿದ್ದು, ಕಷ್ಟಪಟ್ಟು ಮನೆ ನಡೆಸುತ್ತಿದ್ದರೂ ಮಗಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿದ್ದಾರೆ. ಬಿಲ್ಲುಗಾರಿಕೆಯಲ್ಲಿನ ಮಗಳ ಕೈಚಳಕವನ್ನು ಮನಗಂಡಿದ್ದ ತಂದೆ ಪ್ರಜಾಪತಿ, ಬಡತನದಲ್ಲೂ ದೀಪ್ತಿಯನ್ನು ಸೆರೈಕೆಲಾ ಖಾರ್ಸಾವನ್ ತರಬೇತಿ ಕೇಂದ್ರಕ್ಕೆ ಕಳುಹಿಸಿದ್ದರು. ಇದಕ್ಕೆ ಅವರು ಸಾಲದ ಹೊರೆಯನ್ನೂ ಹೊತ್ತಿಕೊಂಡಿದ್ದರು. ಇತ್ತ, ತಂದೆಯ ಕಣ್ಣಲ್ಲಿ ಕಂಡ ಕನಸನ್ನು ದೀಪ್ತಿ ತನ್ನ ಕಠಿಣ ಪರಿಶ್ರಮ ಮತ್ತು ಸಮರ್ಪಣೆ ಭಾವದಿಂದ ನನಸಾಗಿಸಲು ಪ್ರಯತ್ನಿಸಿದ್ದರು.
ಸೆರೈಕೆಲಾ ಖಾರ್ಸಾವನ್ ತರಬೇತಿ ಕೇಂದ್ರದಲ್ಲಿದ್ದ ದೀಪ್ತಿ ಕುಮಾರಿ, ಪ್ರಸ್ತುತ ಅಂತಾರಾಷ್ಟ್ರೀಯ ಬಿಲ್ಲುಗಾರಿಕೆ ಆಟಗಾರ್ತಿ ದೀಪಿಕಾ ಕುಮಾರಿ ಅವರನ್ನು ಭೇಟಿಯಾಗಿ, ಅವರಿಂದಲೂ ಪ್ರಭಾವಿತರಾಗಿದ್ದರು. ತಮ್ಮ ಕೌಶಲ್ಯವನ್ನು ಚುರುಕುಗೊಳಿಸುವ ಮೂಲಕ ತಾನು ಕೂಡ ಬಿಲ್ಲುಗಾರಿಕೆ ಕ್ಷೇತ್ರದಲ್ಲಿ ತನ್ನದೇ ಆದ ಸ್ಥಾನವನ್ನು ಸಾಧಿಸಬೇಕೆಂದು ನಿರ್ಧರಿಸಿದ್ದರು. ಇದಕ್ಕಾಗಿ ದೀಪ್ತಿ ಅನೇಕ ರಾಷ್ಟ್ರೀಯ ಮತ್ತು ರಾಜ್ಯ ಚಾಂಪಿಯನ್‌ಶಿಪ್‌ಗಳಲ್ಲಿ ದೀಪ್ತಿ ಪಾಲ್ಗೊಂಡು ಮಿಂಚಲು ತೊಡಗಿದ್ದರು.
ಬಿಲ್ಲು ಮುರಿದಿದ್ದರಿಂದ ಕಮರಿದ ಕನಸು: ಆದರೆ, ಒಂದು ದಿನ ದೀಪ್ತಿ ಕೋಲ್ಕತ್ತಾದ ಟ್ರಯಲ್ ಸೆಂಟರ್‌ನಿಂದ ನಿರಾಶೆಗೊಂಡು ಮನೆಗೆ ಹಿಂತಿರುಗಬೇಕಾಯಿತು. ಹೌದು, 2013ರಲ್ಲಿ ಕೋಲ್ಕತ್ತಾದಲ್ಲಿ ವಿಶ್ವಕಪ್‌ನ ಟ್ರಯಲ್ ನಡೆಯುತ್ತಿತ್ತು. ಅಲ್ಲಿಗೆ ದೀಪ್ತಿ ಕುಮಾರಿ ಕೂಡ ಭಾಗವಹಿಸಲು ಹೋಗಿದ್ದರು. ಈ ಟ್ರಯಲ್‌ನಲ್ಲಿ ಆಯ್ಕೆಯಾದರೆ ಮುಂದೆ ಆಡುವ ಅವರ ಕನಸು ನನಸಾಗುತ್ತಿತ್ತು. ಆದರೆ, ಅಷ್ಟರಲ್ಲಿ ಈ ಕೇಂದ್ರದಲ್ಲಿದ್ದವರೊಬ್ಬರು 4.5 ಲಕ್ಷ ರೂಪಾಯಿ ಮೌಲ್ಯದ ಬಿಲ್ಲು ಮುರಿದಿದ್ದರು.