ನವದೆಹಲಿ: ದೇಶದಲ್ಲಿ ಕ್ರೀಡೆಗಳಲ್ಲಿ ಡೋಪಿಂಗ್ (ಕ್ರೀಡೆಗಳಲ್ಲಿ ಮಾದಕ ವಸ್ತು ಸೇವನೆ) ನಿಷೇಧಕ್ಕೆ ಶಾಸನಬದ್ಧ ಚೌಕಟ್ಟನ್ನು ಒದಗಿಸಲು ಕೇಂದ್ರ ಸರ್ಕಾರದ ಉದ್ದೇಶಿತ 'ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಮಸೂದೆ 2021'ಗೆ ನಿನ್ನೆ ಲೋಕಸಭೆಯಲ್ಲಿ ಅಂಗೀಕಾರ ದೊರೆತಿದೆ. ಈಗಾಗಲೇ ರಾಷ್ಟ್ರೀಯ ಉದ್ದೀಪನ ಮದ್ದು ಸೇವನೆ ನಿಗ್ರಹ ಸಂಸ್ಥೆಯು (ನಾಡಾ) ವಿಶ್ವ ಉದ್ದೀಪನ ಮದ್ದು ತಡೆ ಘಟಕದ ನಿಯಮಗಳ ಪ್ರಕಾರ ಡೋಪಿಂಗ್ ವಿರೋಧಿ ಕ್ರಮಗಳನ್ನು ಕೈಗೊಳ್ಳುತ್ತಿದೆ.
ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ - ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್
ಕ್ರೀಡೆಗಳಲ್ಲಿ ಮಾದಕ ವಸ್ತು ಸೇವನೆಗೆ ಕಡಿವಾಣ ಹಾಕಲು ರೂಪಿಸಿರುವ ಮಹತ್ವದ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಮಸೂದೆ 2021 ಗೆ ಲೋಕಸಭೆ ಒಪ್ಪಿಗೆ ನೀಡಿದೆ.
ಈ ಮಸೂದೆ ಮಂಡನೆ ವೇಳೆ ಮಾತನಾಡಿದ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್, "ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಮಸೂದೆಯು ಭಾರತದ ಖ್ಯಾತಿಯನ್ನು ಹೆಚ್ಚಿಸುತ್ತದೆ. ದೇಶವು ವಿಶೇಷ ಕಾನೂನುಗಳು ಮತ್ತು ಡೋಪಿಂಗ್ ವಿರೋಧಿ ಪರೀಕ್ಷಾ ಸೌಲಭ್ಯಗಳನ್ನು ಹೊಂದಿರುತ್ತದೆ. ನಾವು ಡೋಪಿಂಗ್ ತನಿಖೆಯ ವ್ಯಾಪ್ತಿಯನ್ನು ವಿಸ್ತರಿಸಬೇಕು ಮತ್ತು ಡೋಪಿಂಗ್ ಪರೀಕ್ಷಾ ಸಾಮರ್ಥ್ಯ ಹೆಚ್ಚಿಸಬೇಕು. ಮಸೂದೆ ಅಂಗೀಕಾರವಾದ ಹಿನ್ನೆಲೆಯಲ್ಲಿ ಸಮರ್ಥ ಮತ್ತು ಸ್ವತಂತ್ರ ಸಿಬ್ಬಂದಿಗಳೊಂದಿಗೆ ಕ್ರೀಡೆಯಲ್ಲಿ ರಾಷ್ಟ್ರೀಯ ಡೋಪಿಂಗ್ ವಿರೋಧಿ ಮಂಡಳಿಯನ್ನು ಸ್ಥಾಪಿಸಲಾಗುವುದು. ಡೋಪಿಂಗ್ ವಿರೋಧಿ ವಿಷಯಗಳ ಶೈಕ್ಷಣಿಕ ಸಂಶೋಧನೆ ಮತ್ತು ತಯಾರಿಕೆಯಲ್ಲಿಈ ಮಸೂದೆ ಸಹಾಯ ಮಾಡುತ್ತದೆ" ಎಂದು ವಿವರಿಸಿದರು.
ಇದನ್ನೂ ಓದಿ:ಚೇಲಾ, ಚಮಚ, ಭ್ರಷ್ಟ, ಜುಮ್ಲಾಜೀವಿ..ಸಂಸತ್ತಿನಲ್ಲಿ ಇಂಥ ಪದಬಳಕೆಗೆ ಕಡಿವಾಣ: ಪಟ್ಟಿ ದೊಡ್ಡದಿದೆ!