ವಾಷಿಂಗ್ಟನ್:ನಾಸಾದ ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕ ಬಳಸಿಕೊಂಡು ಸಂಶೋಧಕರು ಮೊದಲ ಬಾರಿಗೆ ಮತ್ತೊಂದು ನಕ್ಷತ್ರವನ್ನು ಸುತ್ತುವ ಗ್ರಹವಾದ ಎಕ್ಸೋಪ್ಲಾನೆಟ್ ಅನ್ನು ಕಂಡು ಹಿಡಿದಿದ್ದಾರೆ. ಔಪಚಾರಿಕವಾಗಿ LHS 475 b ಎಂದು ವರ್ಗೀಕರಿಸಲಾದ ಈ ಗ್ರಹವು ನಮ್ಮ ಭೂಮಿಯ ಗಾತ್ರದಷ್ಟೇ ಇದೆ. ಇದು ಸುಮಾರು ಭೂಮಿಯ ವ್ಯಾಸದ ಶೇ 99ರಷ್ಟಿದ್ದು, LHS 475 b ತುಲನಾತ್ಮಕವಾಗಿ ಹತ್ತಿರದಲ್ಲಿದೆ. ಇದು ಆಕ್ಟಾನ್ಸ್ ನಕ್ಷತ್ರಪುಂಜದಲ್ಲಿ ಕೇವಲ 41 ಬೆಳಕಿನ ವರ್ಷಗಳ ದೂರದಲ್ಲಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.
ಭೂಮಿಯ ಗಾತ್ರದ, ಕಲ್ಲಿನ ಗ್ರಹದ ಈ ಮೊದಲ ವೀಕ್ಷಣಾ ಫಲಿತಾಂಶಗಳು ವೆಬ್‌ನೊಂದಿಗೆ ರಾಕಿ ಪ್ಲಾನೆಟ್ಗಳ ವಾತಾವರಣವನ್ನು ಅಧ್ಯಯನ ಮಾಡಲು ಭವಿಷ್ಯದ ಅನೇಕ ಸಾಧ್ಯತೆಗಳಿಗೆ ಅನುವು ಮಾಡಿಕೊಡುತ್ತದೆ ಎಂದು ವಾಷಿಂಗ್ಟನ್ ಡಿಸಿಯಲ್ಲಿರುವ ನಾಸಾ ಪ್ರಧಾನ ಕಚೇರಿಯಲ್ಲಿ ಖಗೋಳ ಭೌತಶಾಸ್ತ್ರ ವಿಭಾಗದ ನಿರ್ದೇಶಕ ಮಾರ್ಕ್ ಕ್ಲಾಂಪಿನ್ ಹೇಳಿದ್ದಾರೆ. ನಮ್ಮ ಸೌರವ್ಯೂಹದ ಹೊರಗಿನ ಭೂಮಿಯಂತಹ ಪ್ರಪಂಚಗಳ ಹೊಸ ತಿಳಿವಳಿಕೆಗೆ ವೆಬ್ ನಮ್ಮನ್ನು ಮತ್ತಷ್ಟು ಹತ್ತಿರ ತರುತ್ತಿದೆ ಮತ್ತು ಈ ಯೋಜನೆ ಈಗಷ್ಟೇ ಪ್ರಾರಂಭವಾಗುತ್ತಿದೆ ಎಂದು ಅವರು ಬುಧವಾರ ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ.
ಎಲ್ಲ ದೂರದರ್ಶಕಗಳಿಗೆ ಹೋಲಿಸಿದರೆ ವೆಬ್ ಕಾರ್ಯಾಚರಣೆ ಬೆಸ್ಟ್?:ಮೇರಿಲ್ಯಾಂಡ್‌ನ ಲಾರೆಲ್‌ನಲ್ಲಿರುವ ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ಅನ್ವಯಿಕ ಭೌತಶಾಸ್ತ್ರ ಪ್ರಯೋಗಾಲಯದ ಕೆವಿನ್ ಸ್ಟೀವನ್‌ಸನ್ ಮತ್ತು ಜಾಕೋಬ್ ಲುಸ್ಟಿಗ್ - ಯಾಗರ್ ಅವರು, ಈ ಎಕ್ಸೋಪ್ಲಾನೆಟ್ ಕಂಡು ಹಿಡಿದ ಸಂಶೋಧನಾ ತಂಡದ ನೇತೃತ್ವ ವಹಿಸಿದ್ದಾರೆ. ಕಾರ್ಯಾಚರಣೆಯಲ್ಲಿರುವ ಎಲ್ಲ ದೂರದರ್ಶಕಗಳಿಗೆ ಹೋಲಿಸಿದರೆ ವೆಬ್ ಮಾತ್ರ ಭೂಮಿಯ ಗಾತ್ರದ ಬಾಹ್ಯ ಗ್ರಹಗಳ ವಾತಾವರಣವನ್ನು ಕಂಡು ಹಿಡಿದು ನಿರೂಪಿಸುವ ಸಾಮರ್ಥ್ಯ ಹೊಂದಿದೆ. ಎಕ್ಸೋಪ್ಲಾನೆಟ್ನಲ್ಲಿ ಏನಿದೆ ಎಂಬುದನ್ನು ತಿಳಿಯಲು ಆಗದಿದ್ದರೂ ಅದರಲ್ಲಿ ಏನಿಲ್ಲ ಎಂಬುದನ್ನು ತಂಡವು ಖಂಡಿತವಾಗಿ ಹೇಳಬಹುದು.