ಆಗ್ರಾ: ಇಲ್ಲಿಂದ ಸುಮಾರು 11 ಕಿಲೋಮೀಟರ್ ದೂರದಲ್ಲಿರುವ ಬರಾರಾ ಎಂಬ ಗ್ರಾಮದ 11 ವರ್ಷದ ಪೋರನೊಬ್ಬ ಕೋಡಿಂಗ್ ಕ್ಷೇತ್ರದಲ್ಲಿ ಅಸಾಮಾನ್ಯ ಸಾಧನೆಯಿಂದ ಜಗತ್ತಿನ ಗಮನ ಸೆಳೆದಿದ್ದಾನೆ.
150ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಬಾಲಕ ದೇವಾಂಶ ಧನಗರ್ನ ಪ್ರತಿಭೆಗೆ ಈಗ ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ಕೂಡ ಭೇಷ್ ಎಂದಿದೆ. 2026ರ ಮಿಷನ್ ಮಂಗಳ ಯೋಜನೆಯ ಕೋಡಿಂಗ್ ತಂಡಕ್ಕೆ ಸೇರಿಕೊಳ್ಳಲು ಈ ಬಾಲಕನಿಗೆ ನಾಸಾ ಆಮಂತ್ರಣ ಕೂಡ ನೀಡಿದೆ.
ಈಗಾಗಲೇ 10ಕ್ಕೂ ಹೆಚ್ಚು ಆ್ಯಪ್ಗಳನ್ನು ತಯಾರು ಮಾಡಿರುವ ದೇವಾಂಶ, 500 ಅಧಿಕ ಮಕ್ಕಳಿಗೆ ಆನ್ಲೈನ್ ಮೂಲಕ ಉಚಿತವಾಗಿ ಕೋಡಿಂಗ್ ಮಾಡುವುದನ್ನು ಹೇಳಿಕೊಟ್ಟಿದ್ದಾರೆ. ಸದ್ಯ ಬಾಲಕನ ಸಾಧನೆಗೆ ಕುಟುಂಬದವರು ಭಾರಿ ಖುಷಿಯಾಗಿದ್ದಾರೆ.
ದೇವಾಂಶ ಅವರ ತಂದೆ 1999ರಲ್ಲಿ ಆರ್ಬಿಎಸ್ ಖಂದಾರಿ ಕಾಲೇಜಿನಿಂದ ಎಂಸಿಎ ಮಾಡಿದ್ದರು. ಇವರು ಕಂಪ್ಯೂಟರ್ ಪ್ರೊಗ್ರಾಮರ್ ಆಗಿದ್ದಾರೆ. ತಂದೆಯಿಂದಲೇ ಕೋಡಿಂಗ್ ಕಲಿತ ದೇವಾಂಶ, ಆನ್ಲೈನ್ ಮೂಲಕ ಇದರಲ್ಲಿ ಹೆಚ್ಚಿನ ಜ್ಞಾನ ಪಡೆದುಕೊಂಡಿದ್ದಾರೆ. ದಿನದಲ್ಲಿ 7 ರಿಂದ 8 ಗಂಟೆ ಇವರು ಲ್ಯಾಪ್ಟಾಪ್ ಮುಂದೆಯೇ ಇರುತ್ತಾನಂತೆ. ಸದ್ಯ ಈತ ದೇವಾಂಶ ಮಾರಿಯೊ ಎಂಬ ಗೇಮನ್ನೂ ತಯಾರಿಸಿದ್ದಾನಂತೆ.
ದೇವಾಂಶ ಅವರ ತಂದೆ ಲಖನ್ ಸಿಂಗ್ ಮನೆಯಲ್ಲೇ ಅಕಾಡೆಮಿಯೊಂದನ್ನು ನಡೆಸುತ್ತಿದ್ದು, ಇವರ ಬಳಿ 70 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇವರು ಬಡಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುತ್ತಿದ್ದಾರೆ. ಈ ಮಧ್ಯೆ ದೇವಾಂಶ 8ನೇ ತರಗತಿಯವರೆಗೂ ಶಾಲೆಗೆ ಹೋಗದೆ ಮನೆಯಲ್ಲಿದ್ದೇ ಶಾಲಾ ವಿದ್ಯಾಭ್ಯಾಸ ಮಾಡಿದ್ದಾನೆ. ಇನ್ನು ಹೈಸ್ಕೂಲ್ ಹಂತದಲ್ಲಿ ಶಾಲೆಗೆ ಹಾಜರಾದ ದೇವಾಂಶ ಶೇ 80ರಷ್ಟು ಅಂಕಗಳೊಂದಿಗೆ ಪರೀಕ್ಷೆ ಪಾಸು ಮಾಡಿದ್ದಾನೆ. 11ನೇ ವರ್ಷದಲ್ಲಿಯೇ ಈ ಬಾಲಕ ಇಂಟರ್ ಪರೀಕ್ಷೆ ಬರೆಯಲಿದ್ದಾನೆ.
ದೇವಾಂಶಗೆ 2021ರಲ್ಲಿ ಮಹಾರಾಷ್ಟ್ರ ಸರ್ಕಾರವು ಪ್ರತಿಷ್ಠಿತ ಬಾಲ ಗೌರವ್ ಪ್ರಶಸ್ತಿ ನೀಡಿ ಗೌರವಿಸಿದೆ.
ಇದನ್ನು ಓದಿ:WhatsApp: ಮೆಸೇಜ್ ಡಿಲೀಟ್ ಮಾಡುವ ಸಮಯಾವಧಿ ವಿಸ್ತರಣೆ