ನವದೆಹಲಿ: ದೇಶದಲ್ಲಿ ಪೂರ್ಣ ಬಹುಮತದ ಸರ್ಕಾರ ಇರುವುದರಿಂದಲೇ ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸುವಂಥ ಇಷ್ಟು ದೊಡ್ಡ ಮಟ್ಟದ ಕೆಲಸವನ್ನು ಮಾಡಲು ಸಾಧ್ಯವಾಯಿತು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು. ನಾರಿ ಶಕ್ತಿ ವಂದನ ಅಧಿನಿಯಮ್ ಇದೊಂದು ಸಾಮಾನ್ಯ ಕಾನೂನಲ್ಲ, ಬದಲಾಗಿ ಇದು ನವ ಭಾರತದ ಪ್ರಜಾಪ್ರಭುತ್ವ ಬದ್ಧತೆಯ ಸಂಕೇತವಾಗಿದೆ ಎಂದು ಅವರು ನುಡಿದರು. ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿಂದು ನಡೆದ ನಾರಿ ಶಕ್ತಿ ವಂದನ್-ಅಭಿನಂದನ್ ಕಾರ್ಯಕ್ರಮವನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು.
"ನಾರಿ ಶಕ್ತಿ ವಂದನ್ ಅಧಿನಿಯಮ್ ಸಾಮಾನ್ಯ ಕಾನೂನು ಅಲ್ಲ; ಇದು ನವ ಭಾರತದ ಪ್ರಜಾಸತ್ತಾತ್ಮಕ ಬದ್ಧತೆಯ ಸಂಕೇತವಾಗಿದೆ. ಇದು ಮಹಿಳಾ ನೇತೃತ್ವದ ಅಭಿವೃದ್ಧಿಗೆ ಮೋದಿ ಬದ್ಧವಾಗಿರುವುದರ ಸಾಕ್ಷಿಯಾಗಿದೆ" ಎಂದು ಅವರು ಹೇಳಿದರು. ಸಂಸತ್ತಿನ ಉಭಯ ಸದನಗಳಲ್ಲಿ ಭಾರಿ ಬಹುಮತದೊಂದಿಗೆ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಿದ ಐತಿಹಾಸಿಕ ಸಂದರ್ಭದಲ್ಲಿ ದೇಶದ ಎಲ್ಲ ಮಹಿಳೆಯರನ್ನು ಪ್ರಧಾನಿ ಈ ಸಂದರ್ಭದಲ್ಲಿ ಅಭಿನಂದಿಸಿದರು.
"ಇಂದು, ನಾನು ದೇಶದ ಎಲ್ಲಾ ಮಹಿಳೆಯರನ್ನು ಅಭಿನಂದಿಸುತ್ತೇನೆ. ನಿನ್ನೆ ಮತ್ತು ಅದಕ್ಕೂ ಹಿಂದಿನ ದಿನ, ನಾವು ಹೊಸ ಇತಿಹಾಸದ ರಚನೆಗೆ ಸಾಕ್ಷಿಯಾಗಿದ್ದೇವೆ. ಆ ಇತಿಹಾಸವನ್ನು ರಚಿಸಲು ಕೋಟ್ಯಂತರ ಜನರು ನಮಗೆ ಅವಕಾಶ ನೀಡಿದ್ದು ನಮ್ಮ ಅದೃಷ್ಟ" ಎಂದು ಪ್ರಧಾನಿ ಹೇಳಿದರು.
"ಈ ನಿರ್ಧಾರ ಮತ್ತು ಈ ನಿರ್ಧಾರವನ್ನು ಸಾಕಾರಗೊಳಿಸಿದ ದಿನವನ್ನು ಮುಂದಿನ ಅನೇಕ ತಲೆಮಾರುಗಳವರೆಗೆ ನೆನಪಡಲಾಗುವುದು. ಸಂಸತ್ತಿನ ಉಭಯ ಸದನಗಳಲ್ಲಿ ಬಹುಮತದೊಂದಿಗೆ 'ನಾರಿ ಶಕ್ತಿ ವಂದನ ಕಾಯ್ದೆ'ಯನ್ನು ಅಂಗೀಕರಿಸಿದ್ದಕ್ಕಾಗಿ ನಾನು ಇಡೀ ದೇಶವನ್ನು ಅಭಿನಂದಿಸುತ್ತೇನೆ" ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
"ಕೆಲವೊಮ್ಮೆ ಒಂದೇ ಒಂದು ನಿರ್ಧಾರವು ದೇಶದ ಹಣೆಬರಹವನ್ನು ಬದಲಾಯಿಸುವ ಸಾಮರ್ಥ್ಯ ಹೊಂದಿರುತ್ತದೆ. ಇಂದು ನಾವೆಲ್ಲರೂ ಅಂತಹ ಒಂದು ನಿರ್ಧಾರಕ್ಕೆ ಸಾಕ್ಷಿಯಾಗಿದ್ದೇವೆ. ಕಳೆದ ಹಲವಾರು ದಶಕಗಳಿಂದ ದೇಶವು ಕಾಯುತ್ತಿದ್ದ ಕನಸು ಈಗ ನನಸಾಗಿದೆ" ಎಂದು ಪ್ರಧಾನಿ ಮೋದಿ ಹೇಳಿದರು.
"ನಾರಿ ಶಕ್ತಿ ವಂದನ ಕಾಯ್ದೆಯನ್ನು ಸಂಸತ್ತಿನ ಉಭಯ ಸದನಗಳು ದಾಖಲೆಯ ಮತಗಳೊಂದಿಗೆ ಅಂಗೀಕರಿಸಿವೆ. ಕಳೆದ ಹಲವಾರು ದಶಕಗಳಿಂದ ದೇಶವು ಕಾಯುತ್ತಿದ್ದ ಕನಸು ಈಗ ನನಸಾಗಿದೆ. ದೇಶದಲ್ಲಿ ಪೂರ್ಣ ಬಹುಮತದ ಸರ್ಕಾರವಿದ್ದರೆ ಏನೆಲ್ಲ ಸಾಧಿಸಬಹುದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಮಹಿಳೆಯರ ಮೀಸಲಾತಿಗೆ ಯಾರ ರಾಜಕೀಯ ಸ್ವಹಿತಾಸಕ್ತಿಯೂ ಅಡ್ಡಿಯಾಗಲು ನಾವು ಬಿಡುವುದಿಲ್ಲ." ಎಂದು ಹೇಳಿದ ಪ್ರಧಾನಿ ಸಂಸತ್ತಿನಲ್ಲಿ ಮಸೂದೆಯನ್ನು ಬೆಂಬಲಿಸಿದ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಸಂಸದರಿಗೆ ಧನ್ಯವಾದ ಅರ್ಪಿಸಿದರು.
"ಇಂದು ದೇಶವು ತನ್ನ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳು ಎದುರಿಸುತ್ತಿರುವ ಪ್ರತಿಯೊಂದು ಅಡೆತಡೆಗಳನ್ನು ನಿವಾರಿಸುತ್ತಿದೆ. ಈ ಮಹಿಳಾ ಮೀಸಲಾತಿ ಮಸೂದೆಯ ಹಾದಿಯಲ್ಲಿ ಅನೇಕ ಅಡೆತಡೆಗಳು ಇದ್ದವು. ಆದರೆ ಉದ್ದೇಶಗಳು ಪರಿಶುದ್ಧವಾದಾಗ ಮತ್ತು ಪ್ರಯತ್ನಗಳಲ್ಲಿ ಪಾರದರ್ಶಕತೆ ಇದ್ದಾಗ, ಎಲ್ಲಾ ಅಡೆತಡೆಗಳನ್ನು ನಿವಾರಿಸುವ ಫಲಿತಾಂಶಗಳನ್ನು ನಾವು ನೋಡುತ್ತೇವೆ. ಈ ಮಸೂದೆಗೆ ಸಂಸತ್ತಿನಲ್ಲಿ ಇಷ್ಟೊಂದು ಬೆಂಬಲ ದೊರೆತಿರುವುದು ದಾಖಲೆಯಾಗಿದೆ. ಇದಕ್ಕಾಗಿ ನಾನು ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಸಂಸದರಿಗೆ ಧನ್ಯವಾದ ಅರ್ಪಿಸುತ್ತೇನೆ" ಎಂದು ಪ್ರಧಾನಿ ಮೋದಿ ಹೇಳಿದರು.
ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರನ್ನು ಬಿಜೆಪಿಯ ಮಹಿಳಾ ಕಾರ್ಯಕರ್ತರು ಸನ್ಮಾನಿಸಿದರು. ನಂತರ ನೆರೆದ ಮಹಿಳೆಯರಿಗೆ ಗೌರವದ ಸಂಕೇತವಾಗಿ ಪ್ರಧಾನಿ ಅವರಿಗೆ ನಮಸ್ಕರಿಸಿದರು. ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಮಸೂದೆಯನ್ನು ಯಶಸ್ವಿಯಾಗಿ ಅಂಗೀಕರಿಸಿದ್ದಕ್ಕಾಗಿ ಪ್ರಧಾನಿ ಮೋದಿಯವರನ್ನು ಅಭಿನಂದಿಸಿದರು.
ಇದನ್ನೂ ಓದಿ : 'ಮೋದಿ ಹೇ ತೋ ಮುಮ್ಕಿನ್ ಹೇ...': ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಕ್ಕೆ ಸಚಿವೆ ಸ್ಮೃತಿ ಇರಾನಿ ಮೆಚ್ಚುಗೆ