ನವದೆಹಲಿ:ಕುಸ್ತಿ ತರಬೇತುದಾರ ನರೇಶ್ ದಹಿಯಾ ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಗುರುವಾರ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಬಜರಂಗ್ ಪೂನಿಯಾಗೆ ಸಮನ್ಸ್ ಜಾರಿಗೊಳಿಸಿದೆ. ಸೆಪ್ಟೆಂಬರ್ 6 ರಂದು ಕೋರ್ಟ್ಗೆ ಹಾಜರಾಗುವಂತೆ ತಿಳಿಸಲಾಗಿದೆ. ಮೇ 10 ರಂದು ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ಬಜರಂಗ್ ಪೂನಿಯಾ ಪತ್ರಿಕಾಗೋಷ್ಟಿಯಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ್ದು, ಇದರಿಂದ ನಮಗೆ ಮಾನಹಾನಿ ಮಾಡಲಾಗಿದೆ ಎಂದು ದೂರುದಾರ ನರೇಶ್ ದಹಿಯಾ ನ್ಯಾಯಾಲಯಕ್ಕೆ ನೀಡಿರುವ ದೂರಿನಲ್ಲಿ ತಿಳಿಸಿದ್ದರು.
ಪ್ರಕರಣದ ಹಿನ್ನೆಲೆ ಏನು?:ಭಾರತೀಯ ಕುಸ್ತಿ ಫೆಡರೇಶನ್‌ನ ಪ್ರಸ್ತುತ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿರುವ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಜೊತೆಗೆ ಬಜರಂಗ್ ಪುನಿಯಾ ಅವರು ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಧರಣಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಇದಕ್ಕೂ ಮೊದಲು ಜನವರಿಯಲ್ಲಿ ಪೂನಿಯಾ ಮೊದಲ ಹಂತದ ಧರಣಿಯಲ್ಲಿ ಪಾಲ್ಗೊಂಡಿದ್ದರು. ಇದರ ನಂತರ, ಏಪ್ರಿಲ್ 23 ರಂದು ಜಂತರ್ ಮಂತರ್‌ನಲ್ಲಿ ಮತ್ತೆ ಪ್ರಾರಂಭವಾದ ಧರಣಿ ಪ್ರತಿಭಟನೆಯಲ್ಲಿ ಪೂನಿಯಾ ಸಕ್ರಿಯವಾಗಿ ಭಾಗವಹಿಸಿದ್ದರು. ಪೂನಿಯಾ ಅವರು ಬ್ರಿಜ್‌ಭೂಷಣ್ ಶರಣ್ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಸೇರಿದಂತೆ ಇತರ ಕುಸ್ತಿಪಟುಗಳೊಂದಿಗೆ ಅವರ ಬಂಧನಕ್ಕೆ ಒತ್ತಾಯಿಸುತ್ತಿದ್ದರು.