ನವದೆಹಲಿ:ನೂತನ ಸಂಸತ್ನಲ್ಲಿ ಸಂವಿಧಾನದ ಘಮಲಿದೆ. ಅದುವೇ ನಮ್ಮ ಪ್ರೇರಕ ಶಕ್ತಿ. ಸಂವಿಧಾನದ ಪ್ರತಿನಿಧಿತ್ವವೇ ಈ ನೂತನ ಸಂಸತ್ ಭವನ. ಹೊಸ ಸಂಸತ್ ಭವನ ನವ ಭಾರತದ ಭರವಸೆಯ ಪ್ರತಿಬಿಂಬ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ನೂತನ ಸಂಸತ್ ಭವನದಲ್ಲಿ ಮೊದಲ ಭಾಷಣ ಮಾಡಿದ ಪ್ರಧಾನಿ, ಚೋಳರ ಕಾಲದಲ್ಲಿ ಸೆಂಗೋಲ್ ರಾಜದಂಡವನ್ನು ಬಳಕೆ ಮಾಡಲಾಗುತ್ತಿತ್ತು. ರಾಜಾಜಿ ಅವರ ಸಲಹೆಯಂತೆ ಬ್ರಿಟಿಷರು ಸೆಂಗೋಲ್ ಅನ್ನು ಅಧಿಕಾರ ಹಸ್ತಾಂತರದ ದ್ಯೋತಕವಾಗಿ ನೀಡಿದ್ದರು. ಅದನ್ನೀಗ ನೂತನ ಸಂಸತ್ ಭವನದಲ್ಲಿ ಅಳವಡಿಸಲಾಗಿದೆ. ಪವಿತ್ರ ಸೆಂಗೋಲ್ ಅನ್ನು ಎಲ್ಲೋ ಇಟ್ಟು ಅವಮಾನ ಮಾಡಿದ್ದರು. ಅದನ್ನೀಗ ಸಂಸತ್ತಿನಲ್ಲಿ ಸ್ಥಾಪಿಸಿ ಅದಕ್ಕೀಗ ಹೊಸ ಕಳೆ ತಂದಿದ್ದೇವೆ ಎಂದು ಹೇಳುವ ಮೂಲಕ ಅದರ ಐತಿಹಾಸಿಕತೆಯನ್ನು ಪ್ರಶ್ನಿಸಿದ ವಿಪಕ್ಷಗಳಿಗೆ ತಿರುಗೇಟು ನೀಡಿದರು.
ಪ್ರಜಾಸತ್ತೆ ಒಂದು ಪರಂಪರೆ, ವಿಚಾರಧಾರೆಯಾಗಿದೆ. ವೇದ, ಮಹಾಭಾರತದಂತಹ ಗ್ರಂಥಗಳಲ್ಲಿ ಪ್ರಜಾಸತ್ತತೆಯ ಬಗ್ಗೆ ನಮೂದಿಸಲಾಗಿದೆ. ಬಸವೇಶ್ವರರ ಅನುಭವ ಮಂಟಪದಲ್ಲೂ ಈ ಬಗ್ಗೆ ಹೇಳಲಾಗಿದೆ. ಇವೆಲ್ಲದರ ಮೇಲೂ ನಮಗೆ ನಂಬಿಕೆ ಇದೆ. ಸಂವಿಧಾನವೇ ನಮ್ಮ ಸಂಕಲ್ಪವಾಗಿದೆ. ಸಂವಿಧಾನದ ಪ್ರೇರಕ ಶಕ್ತಿಯೇ, ಪ್ರತಿನಿಧಿತ್ವವೇ ಈ ನೂತನ ಸಂಸತ್ ಭವನವಾಗಿದೆ ಎಂದು ಮೋದಿ ಬಣ್ಣಿಸಿದರು.
ಸಂಸ್ಕೃತ ಶ್ಲೋಕದ ಮೂಲಕ ಟಾಂಗ್:ಕಾರ್ಯಕ್ರಮದಿಂದ ದೂರ ಉಳಿದ ವಿಪಕ್ಷಗಳಿಗೆ ಸಂಸ್ಕೃತ ಶ್ಲೋಕದ ಮೂಲಕ ಟಾಂಗ್ ನೀಡಿದ ಪ್ರಧಾನಿ, ಯಾರು ನಿಲ್ಲುವರೋ ಅವರು ಅಲ್ಲೇ ಉಳಿದು ಹೋಗುತ್ತಾರೆ. ಯಾರು ನಡೆಯುತ್ತಾರೋ ಅವರು ಗುರಿ ಸಾಧಿಸುತ್ತಾರೆ. ಹೀಗಾಗಿ ನಾವು ನಡೆದು ಸಾಗಬೇಕು, ನಿಲ್ಲಬಾರದು ಎಂದು ಮೋದಿ ಹೇಳಿದರು.
ನಾವೀನ್ಯತೆ ಮುಖ್ಯ:ದೇಶ ಅಭಿವೃದ್ಧಿ ಹೊಂದಬೇಕಾದರೆ, ಆಧುನೀಕರಣ ಬೇಕೇ ಬೇಕು. ನಾವು ಕೆಲಸ ಮಾಡುವ ಸ್ಥಳವೂ ನವೀಕರಣ ಆಗಬೇಕು. ಆಗ ನಮ್ಮ ಕೆಲಸವೂ ನಾವೀನ್ಯತೆ ಪಡೆಯಲಿದೆ ಎಂದು ನೂತನ ಸಂಸತ್ ಭವನದ ನಿರ್ಮಾಣವನ್ನು ಸಮರ್ಥಿಸಿಕೊಂಡರು.
ದೇಶದಲ್ಲಿ ಗುಲಾಮಿ ಪರಿಸ್ಥಿತಿ ನಶಿಸಿ ಹೋಗಬೇಕು. ಅಮೃತ ಕಾಲದಿಂದಾಗಿ ನಾವು ನವೀನ ಕಾಲಕ್ಕೆ ಬಂದಿದ್ದೇವೆ. ಹೊಸ ಸಂಸತ್ ಭವನ ಕಂಡು ಪ್ರತಿ ಭಾರತೀಯ ಉಲ್ಲಸಿತನಾಗಿದ್ದಾನೆ. ಇಲ್ಲಿ ಕಲೆ, ಕೌಶಲ್ಯ, ಸಂಸ್ಕೃತಿ, ಸಂವಿಧಾನದ ಆತ್ಮವಿದೆ. ಈ ಭವನವು ನಮ್ಮ ರಾಷ್ಟ್ರದ ವಿವಿಧತೆಯ ಪ್ರತೀಕಗಳನ್ನು ಜೋಡಿಸಿದೆ. ಲೋಕಸಭೆ ರಾಷ್ಟ್ರಪಕ್ಷಿ ರೂಪದಲ್ಲಿ ಕೂಡಿದ್ದರೆ, ರಾಷ್ಟ್ರಪುಷ್ಪ ಕಮಲ ರಾಜ್ಯಸಭೆಯಲ್ಲಿ ಅರಳಿದೆ. 'ಏಕ ಭಾರತ, ಶ್ರೇಷ್ಠ ಭಾರತ' ಎಂಬುದನ್ನು ಇದು ತೋರಿಸುತ್ತದೆ ಎಂದು ಮೋದಿ ಹೇಳಿದರು.
ಪ್ರಧಾನಿ ಮೋದಿ ಟ್ವೀಟ್:ಪ್ರಜಾಪ್ರಭುತ್ವದ ದೇಗುಲ ನೂತನ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ ಲೋಕಾರ್ಪಣೆ ಮಾಡಿ, 'ಇದು ಭರವಸೆ ಮತ್ತು ದೇಶದ ಸಬಲೀಕರಣದ ತೊಟ್ಟಿಲಾಗಲಿ' ಎಂದು ಆಶಿಸಿದ್ದಾರೆ. ಭಾರತದ ಸಂಸತ್ತಿನ ಹೊಸ ಕಟ್ಟಡದ ಉದ್ಘಾಟನೆಯ ಬಳಿಕ ಟ್ವೀಟ್ ಮಾಡಿರುವ ಪ್ರಧಾನಿ, ನಮ್ಮ ಹೃದಯ ಮತ್ತು ಮನಸ್ಸು ಹೆಮ್ಮೆ, ಭರವಸೆ ಮತ್ತು ನಿರೀಕ್ಷೆಗಳಿಂದ ತುಂಬಿದೆ. ಈ ಭವ್ಯ ಕಟ್ಟಡವು ಸಬಲೀಕರಣದ ತೊಟ್ಟಿಲಾಗಲಿದೆ. ಕನಸುಗಳನ್ನು ಹೊತ್ತಿಸುವ ಮತ್ತು ಅವುಗಳನ್ನು ಪೂರೈಸುವ ಸಾಧನವಾಗಲಿ. ಇದು ನಮ್ಮ ಮಹಾನ್ ರಾಷ್ಟ್ರವನ್ನು ಪ್ರಗತಿಯ ಹೊಸ ಎತ್ತರಕ್ಕೆ ಕೊಂಡೊಯ್ಯಲಿ ಎಂದು ಆಶಿಸಿ, ಸಮಾರಂಭದ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:'ಸಂಸತ್ ಉದ್ಘಾಟನೆ ರಾಜ್ಯಾಭಿಷೇಕವಲ್ಲ': ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಟೀಕೆ