ನವದೆಹಲಿ:ಗುಜರಾತ್ ಮುಖ್ಯಮಂತ್ರಿಯಾಗಿ, ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಇಂದಿಗೆ 20 ವರ್ಷಗಳ ನಿರಂತರ ಸಾರ್ವಜನಿಕ ಸೇವೆಯನ್ನು ಪೂರ್ಣಗೊಳಿಸಿದ್ದಾರೆ.
ಬಿಜೆಪಿ ಮುಖಂಡರಾಗಿ ಜನಪ್ರಿಯತೆಗಳಿಸಿದ್ದ ಮೋದಿ, 2001ರ ಅಕ್ಟೋಬರ್ 7 ರಂದು ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಅಲ್ಲಿಂದ 2014ರ ಮೇ 22 ರವರೆಗೆ 13 ವರ್ಷಗಳ ಕಾಲ ಸುದೀರ್ಘವಾಗಿ ಗುಜರಾತ್ ರಾಜ್ಯವನ್ನು ಆಳಿದ್ದ ಮೋದಿ ಬಳಿಕ ಎಂಟ್ರಿ ಕೊಟ್ಟಿದ್ದು, ದೇಶದ ಪ್ರಧಾನಿಯಾಗಿ.
ಉತ್ತರ ಪ್ರದೇಶದ ವಾರಣಾಸಿ ಕ್ಷೇತ್ರದಿಂದ ಅಖಾಡಕ್ಕಿಳಿದು 2014ರ ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಮೋದಿ, ಭಾರತದ 14ನೇ ಪ್ರಧಾನಿಯಾಗಿ ಆಯ್ಕೆಯಾದರು. ಅಂದಿನಿಂದ ಇಂದಿನವರೆಗೆ ಅಂದರೆ ಕಳೆದ 7 ವರ್ಷಗಳಿಂದ ದೇಶದ ಚುಕ್ಕಾಣಿ ಹಿಡಿದಿದ್ದಾರೆ.
ಕಮಲ ಪತಾಕೆ
ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ, ಮನಮೋಹನ್ ಸಿಂಗ್ ಬಳಿಕ ಅತಿ ಹೆಚ್ಚು ಅವಧಿಗೆ ಪ್ರಧಾನಿ ಹುದ್ದೆ ಅಲಂಕರಿಸಿದ ಹೆಗ್ಗಳಿಕೆ ನರೇಂದ್ರ ಮೋದಿ ಅವರದ್ದು. ಇವರು ಪಿಎಂ ಆದ ಬಳಿಕ ಕೇವಲ ಇವರ ಕೀರ್ತಿ ಮಾತ್ರ ಹೆಚ್ಚಲಿಲ್ಲ, ಭಾರತೀಯ ಜನತಾ ಪಕ್ಷದ ಖ್ಯಾತಿಯೂ ಉತ್ತುಂಗಕ್ಕೇರಿತು. ಕಾಂಗ್ರೆಸ್ ಸೇರಿದಂತೆ ಇತರ ಪ್ರಾದೇಶಿಕ ಪಕ್ಷಗಳ ಭದ್ರಕೋಟೆಗಳನ್ನು ಭೇದಿಸಿ ಕಮಲ ತನ್ನ ಪತಾಕೆ ಹಾರಿಸಿತು. ಇದರ ಪರಿಣಾಮ ಇಂದು ಕರ್ನಾಟಕ, ಗುಜರಾತ್, ಉತ್ತರ ಪ್ರದೇಶ, ಗೋವಾ, ತ್ರಿಪುರ ಸೇರಿದಂತೆ ದೇಶದ 18 ರಾಜ್ಯಗಳಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ.
ಸೋಷಿಯಲ್ ಮೀಡಿಯಾದಲ್ಲೂ ಹವಾ
ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗಿರುವ ಅನುಯಾಯಿಗಳೇನು ಕಡಿಮೆ ಇಲ್ಲ. ಟ್ವಿಟರ್ನಲ್ಲಿ ಬರೋಬ್ಬರಿ 71.7 ಮಿಲಿಯನ್, ಇನ್ಸ್ಟಾಗ್ರಾಮ್ನಲ್ಲಿ 6 ಮಿಲಿಯನ್ ಹಾಗೂ ಫೇಸ್ಬುಕ್ನಲ್ಲಿ 46 ಮಿಲಿಯನ್ ಫಾಲೋವರ್ಸ್ ಅನ್ನು ಮೋದಿ ಹೊಂದಿದ್ದಾರೆ. ಪಿಎಂಒ ಇಂಡಿಯಾ (PMO India) ಟ್ವಿಟರ್ ಖಾತೆಯನ್ನೇ 44.2 ಮಿಲಿಯನ್ ಜನರು ಫಾಲೋ ಮಾಡುತ್ತಿದ್ದಾರೆ.
ಇಂದಿನ ಬಿಜೆಪಿ ಕಾರ್ಯಕ್ರಮಗಳು
ನರೇಂದ್ರ ಮೋದಿಯವರು 20 ವರ್ಷಗಳ ಸಾಂವಿಧಾನಿಕ ಹುದ್ದೆ ಪೂರೈಸಿರುವ ಹಿನ್ನೆಲೆಯಲ್ಲಿ ಇಂದು ದೇಶಾದ್ಯಂತ ಬಿಜೆಪಿ ಕಾರ್ಯಕರ್ತರು ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆ-ಸೇವೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ, ಮೋದಿಯವರ 'ಸ್ವಚ್ಛ ಭಾರತ ಅಭಿಯಾನ'ದಡಿ ನದಿಗಳನ್ನು ಸ್ವಚ್ಛಗೊಳಿಸುವ, ದೇಶದಾದ್ಯಂತ ಗುರುದ್ವಾರಗಳಲ್ಲಿ ಪ್ರಧಾನಿ ಮೋದಿ ಅವರ ದೀರ್ಘಾಯುಷ್ಯಕ್ಕಾಗಿ 'ಅರ್ದಾಸ್' ಪ್ರಾರ್ಥನೆ ಸಲ್ಲಿಸುವ, 'ಸೇವಾ ಸಮರ್ಪಣ' ಅಭಿಯಾನದ ಭಾಗವಾಗಿ 'ಲಂಗರ್' (ಅನ್ನದಾನ) ಮಾಡುವ ಕಾರ್ಯಕ್ರಮಗಳನ್ನು ಬಿಜೆಪಿ ಇಂದು ನಡೆಸಲಿದೆ.