ಅಹಮದಾಬಾದ್(ಗುಜರಾತ್): ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ, ಶತಾಯುಷಿ ಹೀರಾಬೆನ್ ಮೋದಿ ಅವರು ಪಂಚಭೂತಗಳಲ್ಲಿ ಲೀನವಾದರು. ಗುಜರಾತ್ನ ಅಹಮದಾಬಾದ್ನಲ್ಲಿ ಇಂದು ಬೆಳಗ್ಗೆ ಅವರ ಅಂತ್ಯಸಂಸ್ಕಾರ ನೆರವೇರಿತು. ಪ್ರಧಾನಿ ಮೋದಿ ಮತ್ತು ಅವರ ಹಿರಿಯ ಸಹೋದರ ಸೋಮಾಭಾಯಿ ಅವರು ಹೀರಾಬೆನ್ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ನೀಡಿದರು.
ಅನಾರೋಗ್ಯದ ಕಾರಣದಿಂದ ಹೀರಾಬೆನ್ ಅವರನ್ನು ಡಿ.28ರಂದು ಅಹಮದಾಬಾದ್ನ ಯುಎನ್ ಮೆಹ್ತಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ದಾಖಲಾದ ದಿನವೇ ನರೇಂದ್ರ ಮೋದಿ ಅಹಮದಾಬಾದ್ಗೆ ಬಂದು ಆರೋಗ್ಯ ವಿಚಾರಿಸಿದ್ದರು. ಆದರೆ, ಇಂದು ಬೆಳಗಿನ ಜಾವ 3.30ರ ಸುಮಾರಿಗೆ ಹೀರಾಬೆನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಈ ವಿಷಯ ತಿಳಿದ ಮೋದಿ ದೆಹಲಿಯಿಂದ ಮುಂಜಾನೆಯೇ ವಿಮಾನದಲ್ಲಿ ಬಂದು ತಾಯಿಯ ಅಂತಿಮ ದರ್ಶನ ಪಡೆದರು. ಪುಷ್ಪ ನಮನ ಸಲ್ಲಿಸಿ, ಅಂತಿಮ ವಿಧಿವಿಧಾನಗಳಲ್ಲಿ ಪಾಲ್ಗೊಂಡರು.
ತಾಯಿಯ ಅಂತಿಮ ಯಾತ್ರೆಯ ಸಂದರ್ಭದಲ್ಲಿ ಪಾರ್ಥಿವ ಶರೀರಕ್ಕೆ ಪ್ರಧಾನಿ ಮೋದಿ ಹೆಗಲುಕೊಟ್ಟರು. ಬಳಿಕ ಅಹಮದಾಬಾದ್ನ ಶವಾಗಾರದಲ್ಲಿ ಅಂತಿಮ ಕ್ರಿಯೆಗಳನ್ನು ಪೂರೈಸಲಾಯಿತು. ಎಲ್ಲ ಸಹೋದರರ ಜೊತೆ ಸೇರಿ ತಾಯಿ ಹೀರಾಬೆನ್ ಅವರ ಪಾರ್ಥಿವ ಶರೀರಕ್ಕೆ ಮೋದಿ ಅಗ್ನಿಸ್ಪರ್ಶ ಮಾಡಿದರು. ಹಿಂದೂ ಸನಾತನ ಪದ್ಧತಿಯಂತೆ ಹೀರಾಬೆನ್ ಅವರ ಅಂತಿಮ ವಿಧಿವಿಧಾನಗಳು ನಡೆದವು.
ಗಣ್ಯರಿಂದ ಸಂತಾಪ:ಹೀರಾಬೆನ್ ನಿಧನದ ಹಿನ್ನೆಲೆಯಲ್ಲಿ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಎಲ್ಲ ಕೇಂದ್ರ ಸಚಿವರು, ರಾಜ್ಯಗಳ ಮುಖ್ಯಮಂತ್ರಿಗಳು, ಸಚಿವರು, ವಿವಿಧ ರಾಜಕೀಯ ಪಕ್ಷದ ಹಿರಿಯರು, ವಿವಿಧ ಕ್ಷೇತ್ರಗಳ ಪ್ರಮುಖರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
"ಹೀರಾಬೆನ್ ಮೋದಿಯವರ ನಿಧನದ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ಪ್ರೀತಿಯ ತಾಯಿಯನ್ನು ಕಳೆದುಕೊಂಡಿರುವ ನರೇಂದ್ರ ಮೋದಿ ಅವರಿಗೆ ನನ್ನ ಹೃದಯಪೂರ್ವಕ ಸಂತಾಪಗಳು. ಈ ಘಳಿಗೆಯಲ್ಲಿ ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಇಡೀ ಕುಟುಂಬದೊಂದಿಗೆ ಇರುತ್ತವೆ" ಎಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.