ಕರ್ನಾಟಕ

karnataka

ETV Bharat / bharat

ಜಮ್ಮು- ಕಾಶ್ಮೀರ ಗಡಿಯಲ್ಲಿ ಡ್ರಗ್ಸ್​​ ಕಳ್ಳ ಸಾಗಣೆ: ಗುಂಡಿನ ದಾಳಿಗೆ ಒಳಗಾಗಿದ್ದ ಆರೋಪಿ ಸಾವು

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿಯಲ್ಲಿ ಮಾದಕವಸ್ತುಗಳ ಕಳ್ಳಸಾಗಣೆ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಯ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಆರೋಪಿ ಮೃತಪಟ್ಟಿದ್ದಾನೆ.

narcotics-smuggler-succumbs-to-bullet-wound-in-jammu
ಜಮ್ಮು-ಕಾಶ್ಮೀರ ಗಡಿಯಲ್ಲಿ ಡ್ರಗ್ಸ್​​ ಕಳ್ಳಸಾಗಣೆ: ಗುಂಡಿನ ದಾಳಿಗೆ ಒಳಗಾಗಿದ್ದ ಆರೋಪಿ ಸಾವು

By ETV Bharat Karnataka Team

Published : Oct 11, 2023, 1:49 PM IST

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಕಣಿವೆ ನಾಡು ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿಯಲ್ಲಿ ಮಾದಕವಸ್ತುಗಳ ಕಳ್ಳಸಾಗಣೆ ವೇಳೆ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಆರೋಪಿಯೊಬ್ಬ ಬುಧವಾರ ಮೃತಪಟ್ಟಿದ್ದಾನೆ. ಮೃತನನ್ನು ಪೂಂಚ್‌ನ ಕರ್ಮರ ಗ್ರಾಮದ ನಿವಾಸಿ ಯಾಸಿರ್ ನಜೀರ್ (22) ಎಂದು ಗುರುತಿಸಲಾಗಿದೆ.

ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಉದ್ದಕ್ಕೂ ಯಾಸಿರ್ ನಜೀರ್ ಮಾದಕವಸ್ತುಗಳ ಕಳ್ಳಸಾಗಣೆ ಪ್ರಯತ್ನಿಸುತ್ತಿದ್ದಾಗ ಭಾರತೀಯ ಸೇನೆಯ ಭದ್ರತಾ ಸಿಬ್ಬಂದಿ ಗುಂಡಿನ ದಾಳಿ ನಡೆಸಿದ್ದರು. ನಂತರ ಗುಲ್ಪುರ್ ಸೆಕ್ಟರ್‌ನಲ್ಲಿ ಗಾಯಗೊಂಡ ಸ್ಥಿತಿಯಲ್ಲಿ ಯಾಸಿರ್​ನನ್ನು ಬಂಧಿಸಲಾಗಿತ್ತು. ಅಲ್ಲಿಂದ ಸೆಪ್ಟೆಂಬರ್ 24ರಂದು ಜಮ್ಮುವಿನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ, ಆತ ಇಂದು ಸಾವನ್ನಪ್ಪಿದ್ದಾನೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಯಾಸಿರ್ ನಜೀರ್ ಬೆಳಗಿನ ಜಾವ 1.25ರ ಸುಮಾರಿಗೆ ಅಸುನೀಗಿದ್ದಾನೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು, ಗಡಿಯಾಚೆಯಿಂದ ಮಾದಕ ವಸ್ತುಗಳನ್ನು ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದಾಗ ಭದ್ರತಾ ಸಿಬ್ಬಂದಿ ನಿಲ್ಲುವಂತೆ ಸೂಚಿಸಿದ್ದರು. ಆದರೆ, ಈ ವೇಳೆ, ತಪ್ಪಿಸಿಕೊಳ್ಳಲು ಯತ್ನಿಸಿದಾಗ ಸೇನಾ ಸಿಬ್ಬಂದಿ ನಜೀರ್ ಮೇಲೆ ಗುಂಡು ಹಾರಿಸಿದ್ದರು. ನಂತರ ಆತನನ್ನು ವಶಕ್ಕೆ ಪಡೆದಾಗ ಡ್ರಗ್ಸ್ ಪ್ಯಾಕೆಟ್​ ಪತ್ತೆಯಾಗಿತ್ತು.

ಇಬ್ಬರು ಉಗ್ರರ ಹತ್ಯೆ:ಮತ್ತೊಂದೆಡೆ, ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಅಲ್ಶಿಪೋರಾ ಪ್ರದೇಶದಲ್ಲಿ ಮಂಗಳವಾರ ಮುಂಜಾನೆ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಎನ್‌ಕೌಂಟರ್‌ ನಡೆದಿದೆ. ಇದರಲ್ಲಿ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಗೆ ಸೇರಿದ ಇಬ್ಬರು ಉಗ್ರರು ಹತರಾಗಿದ್ದಾರೆ. ಇದರಲ್ಲಿ ಓರ್ವ ಈ ವರ್ಷದ ಫೆಬ್ರವರಿಯಲ್ಲಿ ನಡೆದ ಕಾಶ್ಮೀರಿ ಪಂಡಿತ ಸಂಜಯ್ ಶರ್ಮಾ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

''ಶೋಪಿಯಾನ್ ಎನ್‌ಕೌಂಟರ್​ನಲ್ಲಿ ಹತ್ಯೆಯಾದ ಉಗ್ರರನ್ನು ಮೋರಿಫತ್ ಮಕ್ಬೂಲ್ ಮತ್ತು ಭಯೋತ್ಪಾದಕ ಸಂಘಟನೆ ಎಲ್ಇಟಿಯ ಜಾಜಿಮ್ ಫಾರೂಕ್ ಅಲಿಯಾಸ್ ಅಬ್ರಾರ್ ಎಂದು ಗುರುತಿಸಲಾಗಿದೆ. ಕಾಶ್ಮೀರಿ ಪಂಡಿತ ಸಂಜಯ್ ಶರ್ಮಾ ಹತ್ಯೆಯಲ್ಲಿ ಭಯೋತ್ಪಾದಕ ಅಬ್ರಾರ್ ಭಾಗಿಯಾಗಿದ್ದ ಎಂದು ಕಾಶ್ಮೀರ ಎಡಿಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ'' ಎಂದು ಕಾಶ್ಮೀರ ವಲಯ ಪೊಲೀಸ್​ ಇಲಾಖೆಯು ಸಾಮಾಜಿಕ ಜಾಲತಾಣ 'ಎಕ್ಸ್​'ನಲ್ಲಿ ಪೋಸ್ಟ್​ ಮಾಡಿದೆ. ಕಾಶ್ಮೀರಿ ಪಂಡಿತ ಸಂಜಯ್ ಶರ್ಮಾ ಅವರನ್ನು ಈ ವರ್ಷ ಫೆ.26ರಂದು ಅಚಾನ್ ಗ್ರಾಮದಲ್ಲಿ ಗುಂಡಿಕ್ಕಿ ಕೊಲೆ ಮಾಡಲಾಗಿತ್ತು.

ಇದನ್ನೂ ಓದಿ:ಮನಬಂದಂತೆ ಗುಂಡು ಹಾರಿಸಿ ಗುತ್ತಿಗೆದಾರನ ಹತ್ಯೆ..! ಪ್ರಕರಣ ಗಂಭೀರವಾಗಿ ಪರಿಗಣಿಸಿದ ಪೊಲೀಸರು!

ABOUT THE AUTHOR

...view details