ನವದೆಹಲಿ: ನಾರದ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ನಾಲ್ವರು ಟಿಎಂಸಿ ನಾಯಕರಿಗೆ ಕೋಲ್ಕತ್ತಾ ಹೈಕೋರ್ಟ್ ಮಧ್ಯಂತರ ಜಾಮೀನು ಮುಂಜೂರು ಮಾಡಿದೆ. ಪ್ರತಿಯೊಬ್ಬರಿಗೂ ತಲಾ 2 ಲಕ್ಷ ರೂಪಾಯಿ ವೈಯಕ್ತಿಕ ಬಾಂಡ್ ಇಡುವಂತೆ ಷರತ್ತು ವಿಧಿಸಿ ಜಾಮೀನು ನೀಡಿದೆ.
ಇದಲ್ಲದೇ ಈ ಪ್ರಕರಣ ಸಂಬಂಧ ಮಾಧ್ಯಮಗಳ ಮುಂದೆ ಯಾವುದೇ ಹೇಳಿಕೆ ನೀಡದಂತೆ ಅಥವಾ ಪ್ರಕಟಣೆಗಳ ಹೊರಡಿಸದಂತೆ ಕೋರ್ಟ್ ಆದೇಶಿಸಿದೆ. ಪ್ರಕರಣ ಸಂಬಂಧ ಮಂತ್ರಿಗಳಾದ ಸುಬ್ರತಾ ಮುಖರ್ಜಿ ಮತ್ತು ಫಿರ್ಹಾದ್ ಹಕೀಮ್, ಮತ್ತು ತೃಣಮೂಲ ಶಾಸಕ ಮದನ್ ಮಿತ್ರ ಸೇರಿದ್ದಾರೆ. ಮಾಜಿ ಬಿಜೆಪಿ ಮತ್ತು ಕೋಲ್ಕತಾ ಮಹಾನಗರ ಪಾಲಿಕೆಯ (ಕೆಎಂಸಿ) ಮಾಜಿ ಮೇಯರ್ ಸೋವನ್ ಚಟರ್ಜಿಯವರನ್ನು ಕೇಂದ್ರ ತನಿಖಾ ಸಂಸ್ಥೆ ಬಂಧಿಸಿತ್ತು.
2016ರ ಪಶ್ಚಿಮ ಬಂಗಾಳ ಚುನಾವಣೆಗೂ ಮುನ್ನ ನಾರದ ಎಂಬ ಸುದ್ದಿ ವಾಹಿನಿ ನಡೆಸಿದ ಸ್ಟಿಂಗ್ ಆಪರೇಷನ್ನಲ್ಲಿ ಟಿಎಂಸಿ ನಾಯಕರು ಲಂಚ ತೆಗೆದುಕೊಳ್ಳುತ್ತಿರುವುದು ಬಯಲಾಗಿತ್ತು. ಈ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. 2017ರ ಮಾರ್ಚ್ನಲ್ಲಿ ಕೋಲ್ಕತ್ತಾ ಹೈಕೋರ್ಟ್ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು. ಮ್ಯಾಥ್ಯೂ ಸ್ಯಾಮ್ಯುಯೆಲ್ ನಡೆಸಿದ ನಾರದಾ ಸ್ಟಿಂಗ್ ಆಪರೇಷನ್ನಲ್ಲಿ ತೃಣಮೂಲ ಕಾಂಗ್ರೆಸ್ ಮುಖಂಡರು ಮತ್ತು ಮಂತ್ರಿಗಳು ಕ್ಯಾಮೆರಾದ ಮುಂದೆ ಲಂಚ ಸ್ವೀಕರಿಸಿ ಸಿಕ್ಕಿ ಹಾಕಿಕೊಂಡಿದ್ದರು. ಈ ವೇಳೆ ಮಮತಾ ಬ್ಯಾನರ್ಜಿ ಮೂರನೇ ಬಾರಿಗೆ ಸಿಎಂ ಆಗಿ ಅಧಿಕಾರ ಹಿಡಿದಿದ್ದರು.
ಇವರಲ್ಲದೇ ಬಿಜೆಪಿ ಹಾಲಿ ರಾಷ್ಟ್ರೀಯ ಉಪಾಧ್ಯಕ್ಷ ಮುಕುಲ್ ರಾಯ್ ಮತ್ತು ಹಾಲಿ ಶಾಸಕ ಮತ್ತು ಟಿಎಂಸಿಯಿಂದ ಬಿಜೆಪಿ ಸೇರಿರುವ ಸುವೆಂದು ಅಧಿಕಾರಿ ಹೆಸರು ಸಹ ಈ ಪ್ರಕಣದಲ್ಲಿ ಕೇಳಿ ಬಂದಿತ್ತು.
ಓದಿ: ಕುಸ್ತಿಪಟು ಸುಶೀಲ್ ಕುಮಾರ್ ‘ಮಾಧ್ಯಮ ವಿಚಾರಣೆ’ ತಡೆ ನಿರಾಕರಿಸಿದ ದೆಹಲಿ ಹೈಕೋರ್ಟ್