ಹೈದರಾಬಾದ್(ತೆಲಂಗಾಣ): ಪ್ರವಾದಿ ಮೊಹಮ್ಮದ್ ಪೈಗಂಬರ್ ಕುರಿತಾಗಿ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದ ಮೇಲೆ ಬಂಧನವಾಗಿರುವ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್ ಕೋರ್ಟ್ನಿಂದ ಜಾಮೀನು ಪಡೆದುಕೊಂಡು ಹೊರಬಂದಿದ್ದಾರೆ. ಇಂದು ಬೆಳಗ್ಗೆ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಅವರನ್ನ ನಾಂಪಲ್ಲಿ ನ್ಯಾಯಾಲಯಕ್ಕೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ವಿಚಾರಣೆ ನಡೆಸಿದ ಕೋರ್ಟ್, ಯಾವುದೇ ಷರತ್ತುಗಳಿಲ್ಲದೆ ಕೇವಲ 45 ನಿಮಿಷಗಳಲ್ಲಿ ಜಾಮೀನು ಮಂಜೂರು ಮಾಡಿದೆ. ಜೊತೆಗೆ ತಕ್ಷಣವೇ ಬಿಡುಗಡೆ ಮಾಡುವಂತೆ ಆದೇಶ ಹೊರಡಿಸಿದೆ.
ಇದಕ್ಕೂ ಮೊದಲು ಶಾಸಕ ರಾಜಾ ಸಿಂಗ್ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಬೇಕೆಂದು ಸಲ್ಲಿಕೆ ಮಾಡಿದ್ದ ಪೊಲೀಸರ ಅರ್ಜಿ ತಿರಸ್ಕರಿಸಿದ್ದ ಕೋರ್ಟ್, ಸಿಆರ್‌ಪಿಸಿ 41ಎ ಪೊಲೀಸರಿಂದ ಪಾಲನೆಯಾಗಿಲ್ಲ ಎಂದು ಹೇಳಿತ್ತು. ಇದರ ಬೆನ್ನಲ್ಲೇ ಜಾಮೀನು ಕೋರಿ ಸಲ್ಲಿಕೆ ಮಾಡಿದ್ದ ಶಾಸಕರ ಅರ್ಜಿ ಸ್ವೀಕರಿಸಿದ ಕೋರ್ಟ್ ಯಾವುದೇ ಷರತ್ತು ಇಲ್ಲದೇ ಜಾಮೀನು ಮಂಜೂರು ಮಾಡಿದೆ.
ಕೋರ್ಟ್ ಮುಂದೆ ಪ್ರತಿಭಟನೆ, ಲಾಠಿ ಪ್ರಹಾರ: ಶಾಸಕರನ್ನು ಬಂಧನ ಮಾಡಿರುವ ನಿರ್ಧಾರ ಖಂಡಿಸಿ, ಕೋರ್ಟ್ ಮುಂದೆ ಅವರ ಬೆಂಬಲಿಗರು ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದರು. ಯಾವುದೇ ರೀತಿಯ ಅಹಿತಕರ ಘಟನೆ ನಡೆಯಬಾರದು ಎಂಬ ಉದ್ದೇಶದಿಂದ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಇದೇ ವೇಳೆ ರಾಜಾ ಸಿಂಗ್ ವಿರುದ್ಧ ಕೆಲವರು ಘೋಷಣೆ ಕೂಗಿದ ಘಟನೆ ಸಹ ನ್ಯಾಯಾಲಯದ ಆವರಣದಲ್ಲಿ ನಡೆದಿದೆ. ಹೀಗಾಗಿ, ಪೊಲೀಸರು ಲಾಠಿ ಪ್ರಹಾರ ನಡೆಸಿದರು.